ADVERTISEMENT

ಕೋಲಾರ | ತಹಶೀಲ್ದಾರ್‌ ಕಚೇರಿ; ಭ್ರಷ್ಟಾಚಾರ ವಾಸನೆ

ಶಿರಸ್ತೇದಾರನ ಫೋನ್‌ಪೇ ಹಿಸ್ಟರಿ ಪರಿಶೀಲಿಸಿದ ಉಪಲೋಕಾಯುಕ್ತ 5 ಖಾತೆ ಪತ್ತೆ!

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 7:29 IST
Last Updated 11 ಮಾರ್ಚ್ 2025, 7:29 IST
ಕೋಲಾರ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಉಪಲೋಕಾಯುಕ್ತ ಬಿ.ವೀರಪ್ಪ, ತಹಶೀಲ್ದಾರ್‌ ಹಾಗೂ ಶಿರಸ್ತೇದಾರರನ್ನು ತರಾಟೆಗೆ ತೆಗೆದುಕೊಂಡರು 
ಕೋಲಾರ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಉಪಲೋಕಾಯುಕ್ತ ಬಿ.ವೀರಪ್ಪ, ತಹಶೀಲ್ದಾರ್‌ ಹಾಗೂ ಶಿರಸ್ತೇದಾರರನ್ನು ತರಾಟೆಗೆ ತೆಗೆದುಕೊಂಡರು    

ಕೋಲಾರ: ನಗರದಲ್ಲಿರುವ ಕೋಲಾರ ತಾಲ್ಲೂಕು ತಹಶೀಲ್ದಾರ್‌ ಕಚೇರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಸೋಮವಾರ ದಿಢೀರ್‌ ಭೇಟಿ ನೀಡಿ ಕಡತ ವಿಳಂಬ ಮಾಡುತ್ತಿರುವುದಕ್ಕೆ, ಜನರನ್ನು ಸತಾಯಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಶಿರಸ್ತೇದಾರ್‌ ಭಾಸ್ಕರ್‌ ಎಂಬುವರ ಮೊಬೈಲ್‌ ಪಡೆದು ಅವರ ಹಣಕಾಸು ವಹಿವಾಟನ್ನು ಪರಿಶೀಲಿಸಿದರು.

ಫೋನ್‌ಪೇ ಹಿಸ್ಟರಿ ಪರಿಶೀಲಿಸಿದಾಗ ₹ 1ಲಕ್ಷ, ₹ 80 ಸಾವಿರ, ₹ 50 ಸಾವಿರ, 20 ಸಾವಿರ‌...ಹೀಗೆ, ಪದೇಪದೇ ಹಣ ವರ್ಗಾವಣೆಯಾಗಿರುವುದು‌ ಗೊತ್ತಾಯಿತು. ಇವರೆಲ್ಲಾ ಯಾರು, ಏಕೆ ಹಣ ಹಾಕಿದ್ದಾರೆ ಎಂಬುದಾಗಿ ಪ್ರಶ್ನಿಸಿದರು. ಆಗ ಆ ಅಧಿಕಾರಿಯು ಗೆಳೆಯರು, ‌ಕುಟುಂಬದವರು, ಸಾಲ ಎಂದೆಲ್ಲಾ ತೊದಲಿದರು.

ADVERTISEMENT

‘ಏನ್ರಿ ನೀವು ಆರ್‌ಬಿಐ ಬ್ಯಾಂಕಾ? ಇಷ್ಟೊಂದು ವ್ಯವಹಾರ ಮಾಡಿದ್ದಿರಲ್ಲ. ಈ ಅಧಿಕಾರಿಯ ಮೇಲೆ ಯಾರೂ ನಿಗಾ ಇಟ್ಟಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡರು. ಆಗ ಆ ಶಿರಸ್ತೇದಾರ ಬೆವರಲಾಂಭಿಸಿದರು.

ಆ ಅಧಿಕಾರಿ ಮೊಬೈಲ್‌ನಲ್ಲಿ ಐದು ಬ್ಯಾಂಕ್‌ ಖಾತೆಗಳಿರುವುದು ಪತ್ತೆಯಾಯಿತು. ಎಲ್ಲದರಲ್ಲಿ ಎಷ್ಟೆಷ್ಟು ವಹಿವಾಟು ನಡೆದಿದೆ ಓಪನ್‌ ಮಾಡಿಕೊಡು ಎಂದು ವೀರಪ್ಪ ಪಟ್ಟು ಹಿಡಿದರು. ಆಗ ಆ ಶಿರಸ್ತೇದಾರ ಪಾಸ್ವರ್ಡ್‌ ಮರೆತು ಹೋಗಿದೆ ಎನ್ನುತ್ತಿದ್ದಂತೆ ಮತ್ತೆ ಕೋಪಗೊಂಡರು. ಎಲ್ಲಾ ಪ್ರಿಂಟ್‌ಔಟ್‌ ತೆಗೆಸಿಕೊಡಿ ಎಂದು ತಾಕೀತು ಮಾಡಿದರು.

ಹಳೆಯ ಪ್ರಕರಣಗಳು ಹೆಚ್ಚು ಬಾಕಿ ಇರುವುದಕ್ಕೆ ಗರಂ ಆದರು. ಜಮೀನಿನ ಖಾತೆಯನ್ನು ಸರಿಯಾಗಿ ಮಾಡುತ್ತಿಲ್ಲವೆಂದು ದೂರು ನೀಡಲು ಬಂದವರಿಗೆ, ‘ಮೊದಲು ಜನರು ಬದಲಾಗಬೇಕು‌, ಭ್ರಷ್ಟಾಚಾರ ತೊಲಗಬೇಕು’ ಎಂದರು.

ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೆ, ಹದ್ದುಬಸ್ತಿಗಾಗಿ ಸಲ್ಲಿಸಿರುವ ಸುಮಾರು 200 ಅರ್ಜಿಗಳು ಬಾಕಿ ಇರುವುದು ಗೊತ್ತಾಯಿತು. ನಗದು ಘೋಷಣಾ ಪುಸ್ತಕವನ್ನು ಸರಿಯಾಗಿ ನಿರ್ವಹಿಸಿರಲಿಲ್ಲ.

ಡಿಐಸಿ ಕಚೇರಿ ಖಾಲಿಖಾಲಿ: ಜಿಲ್ಲಾ ಕೈಗಾರಿಕಾ ಕೇಂದ್ರ ವಾಣಿಜ್ಯ ಇಲಾಖೆ (ಡಿಐಸಿ) ಕಚೇರಿಗೆ ಉಪಲೋಕಾಯುಕ್ತರು ಭೇಟಿ ನೀಡಿದಾಗ ಜಂಟಿ ನಿದೇರ್ಶಕ ಹೊರತುಪಡಿಸಿ ಉಪನಿರ್ದೇಶಕ ರವಿಚಂದ್ರ ಸೇರಿದಂತೆ ಬೇರೆ ಯಾವ ಅಧಿಕಾರಿಯೂ ಇರಲಿಲ್ಲ. ಇಲ್ಲಿ ಜನರಿಗೆ ತಲುಪಿಸಬೇಕಾಗಿರುವ ಸೌಲಭ್ಯಗಳು ದುರುಪಯೋಗ ಆಗಿದೆ, ಗೈರಾಗಿರುವ ಅಧಿಕಾರಿ, ಸಿಬ್ಬಂದಿಯ ಮಾಹಿತಿ ಕೊಡಬೇಕು ಎಂದು ವೀರಪ್ಪ ಗರಂ ಆದರು.

ದಿಢೀರ್‌ ಭೇಟಿ ವೇಳೆ ಅರವಿಂದ, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್‌ ಎಸ್‌.ಹೊಸಮನಿ, ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಿ.ಧನಂಜಯ್‌, ಇನ್‌ಸ್ಪೆಕ್ಟರ್‌ ಯಶವಂತ್‌ ಕುಮಾರ್‌, ಆಂಜಿನಪ್ಪ, ರೇಣುಕಾ, ಸಿಬ್ಬಂದಿ ‌ದೇವ ಎಸ್‌.ಆರ್., ನಾಗವೇಣಿ, ಪವಿತ್ರಾ, ಸುಬ್ರಮಣಿ, ವಾಸುದೇವ, ನಾಗಭೂಷಣ್‌, ರಮೇಶ್‌, ಶಿವಶಂಕರ್‌, ಶೋಭಾ, ಮಾನಸಾ, ಶ್ರೀನಿವಾಸ್‌, ದೀನದಯಾಳ್‌, ಶ್ರೀನಿವಾಸಲು, ಮಂಜುನಾಥ್‌, ಮಂಜಪ್ಪ, ಅಜಯ್‌, ರಾಜಗೋಪಾಲ್‌ ಇದ್ದರು.

ಇಡೀ ದಿನ ವಿವಿಧ ಕಚೇರಿಗಳಿಗೆ ದಿಢೀರ್‌ ಭೇಟಿ ಉಪಲೋಕಾಯುಕ್ತ ವೀರಪ್ಪಗೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಧನಂಜಯ್‌ ಸಾಥ್‌ ಅಧಿಕಾರಿ, ಸಿಬ್ಬಂದಿಯ ಮೊಬೈಲ್‌ ಪಡೆದು ಪರಿಶೀಲನೆ ‌

ತಹಶೀಲ್ದಾರ್‌ ನಯನಾಗೆ ತರಾಟೆ

‘ಏಕಮ್ಮಾ ಹಾಜರಾತಿ ಪುಸ್ತಕದಲ್ಲಿ ಸಿಗ್ನೇಚರ್ ಮಾಡಿಲ್ಲ? ನೀವೇನು ಸ್ಪೆಷಲ್ಲೇ ಬೇರೆ ತಾಲ್ಲೂಕುಗಳಲ್ಲಿ ಸಹಿ ಮಾಡುತ್ತಾರೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟು ಹೋಗಿ. ಇಷ್ಟೊಂದು ಕಡತ ಬಾಕಿ ಇಟ್ಟುಕೊಂಡಿದ್ದೀರಿ ಏಕೆ? ತಮ್ಮ ಬಗ್ಗೆ ದೂರುಗಳಿವೆ ಜಿಲ್ಲಾಧಿಕಾರಿಗೂ ಸಿಗದಷ್ಟು ಬ್ಯುಸಿಯಾಗಿರುತ್ತೀರಂತೆ’ ಎಂದು ಉಪಲೋಕಾಯುಕ್ತರು ತಹಶೀಲ್ದಾರ್‌ ನಯನಾ ಅವರನ್ನು ತರಾಟೆಗೆ ತೆಗೆದುಕೊಂಡರು. ಲೋಕಾಯುಕ್ತ ಅಧಿಕಾರಿಗಳು ನಯನಾ ಅವರ ಮೊಬೈಲ್‌ ಪಡೆದು ಹಣಕಾಸು ವಹಿವಾಟು ಪರಿಶೀಲಿಸಿದರು. ಕಡತ ವಿಲೇವಾರಿ ವಿಳಂಬ ಜಾತಿ ಪ್ರಮಾಣಪತ್ರ ವಿಳಂಬ ಮಾಡುತ್ತಿರುವುದಕ್ಕೆ ಗ್ರೇಡ್–2 ತಹಶೀಲ್ದಾರ್‌ ಹನ್ಸ ಮರಿಯಾ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಎಸ್‌ಡಿಎ ನೂರಾರು ಆಸ್ತಿ ನೋಂದಣಿ

ಕೋಲಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಎರಡು ತಿಂಗಳಿನಿಂದ ಹಿರಿಯ ಉಪನೋಂದಣಾಧಿಕಾರಿ ಇಲ್ಲ. ಹಿಂದೆ ಇದ್ದ ಪ್ರಸಾದ್‌ ಕುಮಾರ್‌ ದೇವನಹಳ್ಳಿಗೆ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಮತ್ತೊಬ್ಬರು ಬಂದಿಲ್ಲ. ಈ ಎರಡು ತಿಂಗಳಲ್ಲಿ ನೂರಾರು ಆಸ್ತಿ ನೋಂದಣಿ ಆಗಿದ್ದು ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ಎ.ಶಿವರಾಜು ಎಂಬುವರು ನಿರ್ವಹಿಸಿರುವುದು ಗೊತ್ತಾಯಿತು. ಆವರಣದಲ್ಲಿ ಜನರು ತುಂಬಿ ಹೋಗಿದ್ದರು. ಕೂರಲು ಚೇರ್‌ ಇರಲಿಲ್ಲ. ಅವ್ಯವಸ್ಥೆ ಕಂಡು ಉಪಲೋಕಾಯುಕ್ತರು ಗರಂ ಆದರು.

ಒಂದೇ ಕಡೆ ಎರಡು ಬಾರು!

ಶ್ರೀನಿವಾಸಪುರ ಕಡೆಗೆ ಹೋಗುವ ರಸ್ತೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿ ನಿಲಯದಿಂದ ಸುಮಾರು 100 ಮೀಟರ್ ಅಂತರದಲ್ಲಿ ಒಂದೇ ಕಡೆ ಎರಡು ಬಾರುಗಳಿಗೆ ಅನುಮತಿ ನೀಡಿರುವುದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡರು.

ಅಂತರರಾಜ್ಯ ವಾಹನಕ್ಕೆ ನೋಂದಣಿಗೆ ತರಾಟೆ  

ಆರ್‌ಟಿಒ ಕಚೇರಿಗೆ ಭೇಟಿ ನೀಡಿದ ವೇಳೆ ವೀರಪ್ಪ ಅವರು ನಮನ್ನು ಯಾಮಾರಿಸಬೇಡಿ ನಮ್ಮವರಿಗೂ ಕಂಪ್ಯೂಟರ್‌ ಜ್ಞಾನ ಇದೆ ಎಂದು ಆರ್‌ಟಿಒ ಸಿಬ್ಬಂದಿ ವಿರುದ್ಧ ಗುಡುಗಿದರು. ಆರ್‌ಟಿಒ ಅಧಿಕಾರಿ ವೇಣುಗೋಪಾಲ ರೆಡ್ಡಿ ‘ಜಿಲ್ಲೆಯಲ್ಲಿ 200 ಶಾಲಾ ಬಸ್‌ 51 ಬಸ್‌ಗಳಿಗೆ ಎನ್‌ಸಿ ಇಲ್ಲದೆ ಇರುವುದು ಪತ್ತೆಯಾಗಿದ್ದು 4 ಬಸ್‌ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದರು. ಆಗ ಉಪಲೋಕಾಯುಕ್ತರು ‘ಹೊರ ರಾಜ್ಯದ 30 ಖಾಸಗಿ ಬಸ್‌ ನೋಂದಣಿಯಾಗಿವೆ. ಬಸ್‌ಗಳು ಚೆಕ್‌ ಪೋಸ್ಟ್‌ನಲ್ಲೇ ತೆರಿಗೆ ಕಟ್ಟಿಕೊಂಡು ರಾಜರೋಷವಾಗಿ ಓಡಾಡುತ್ತವೆ. ಶಾಲಾ ಕಾಲೇಜು ವಾಹನಗಳಿಗೆ ದಾಖಲೆ ಇಲ್ಲದಿದ್ದರೆ ಅನಾಹುತ ಸಂಭವಿಸಿದಾಗ ಹೊಣೆ ಯಾರು ಪರಿಹಾರ ಯಾರು ನೀಡುತ್ತಾರೆ? ಖಾಸಗಿ ಕಂಪನಿಯವರಿಗೆ ಟ್ರಾಕ್ಟರ್‌ಗೆ ಅನುಮತಿ ಸಿಗುತ್ತದೆ ಎಂದರೆ ಹೇಗೆ? ಹೆದ್ದಾರಿಯಲ್ಲಿ ಟೋಲ್‌ ತಪ್ಪಿಸಲು ಹಸಿರು ಫಲಕ ಹಾಕಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಹಸಿರು ಫಲಕಗಳಿದ್ದರೆ ಸೀಜ್‌ ಮಾಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.