ಕೋಲಾರ: 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ತ್ರಿವರ್ಣ ಧ್ವಜದ ರಂಗು ಚೆಲ್ಲಿ ದೇಶಪ್ರೇಮದ ಕಹಳೆ ಮೊಳಗಿತು. ಮಕ್ಕಳ ನೃತ್ಯದ ಸೊಬಗು ದೇಶಭಕ್ತಿಯ ಹಣತೆ ಹಚ್ಚಿಸಿತು.
ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೊಬಗು ತಂದವು. ಮಕ್ಕಳು, ವಯೋವೃದ್ಧರು ಸಂಭ್ರಮ ಕಣ್ತುಂಬಿಕೊಂಡರು. ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು.
ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಗೀತೆ ಹಾಗೂ ನಾಡಗೀತೆ ಬಳಿಕ ತೆರೆದ ಜೀಪಿನಲ್ಲಿ ತೆರಳಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆನಂತರ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ನಾಗರಿಕ ಪೊಲೀಸ್ ತಂಡ, ಜಿಲ್ಲಾ ಪೊಲೀಸ್ ಮಹಿಳಾ ತಂಡ, ಗೃಹ ರಕ್ಷಕ ದಳ, ಜಿಲ್ಲಾ ಪ್ರವಾಸಿ ಮಿತ್ರ ತಂಡ, ಎನ್‌ಸಿಸಿ ತಂಡ, ಭಾರತ್ ಸೇವಾದಳ, ಸ್ಕೌಟ್ಸ್ ತಂಡ, ವಿವಿಧ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ 24 ತುಕಡಿಗಳು ಪಥಸಂಚಲನ ನಡೆಸಿದವು. ಪರೇಡ್‌ನಲ್ಲಿ ಕೊನೆಯದಾಗಿ ಬಂದ ಅಂತರಗಂಗೆ ವಿದ್ಯಾಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ಪಥಸಂಚಲನ ಅತ್ಯಾಕರ್ಷಕವಾಗಿತ್ತು. ವಾದ್ಯವೃಂದ ತಂಡಗಳು ಪರೇಡ್‌ನಲ್ಲಿ ಸಾಗಿದವು.
ಅಂಗಾಂಗ ದಾನ ಮಾಡಿದ ಜಿಲ್ಲೆಯ ಆರು ಮಂದಿಯ ಕುಟುಂಬಸ್ಥರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಐವರನ್ನು ಸತ್ಕರಿಸಲಾಯಿತು. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್ ಕ್ರೀಡಾಂಗಣದ ಹೊರಭಾಗದಲ್ಲಿ ನಗರಸಭೆ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊರಾಂಗಣ ಜಿಮ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ‘ಯೋಗ ಮಂದಿರ’ ಯೋಗ ತರಬೇತಿಗೆ ಚಾಲನೆ ನೀಡಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣ ಹಾಗೂ ಸುತ್ತಮುತ್ತಲ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್‌ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಡಿಸಿಎಫ್ ಸರೀನಾ ಸಿಕ್ಕಲಿಗಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಸ್. ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ಡಾ.ನಯನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷ ಸಂಗೀತಾ, ನಗರಸಭೆ ಆಯುಕ್ತ ನವೀನ್ ಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್‌ಸಿ ಘಟಕದ ಅಧ್ಯಕ್ಷ ಜಯದೇವ್, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಲ್ಲೆಡೆ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ 24 ತುಕಡಿಗಳಿಂದ ಆಕರ್ಷಕ ಪಥಸಂಚಲನ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನ
ದೇಶಭಕ್ತಿ ಹಣತೆ ಹಚ್ಚಿದ ಮಕ್ಕಳು
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ರಾಷ್ಟ್ರೀಯ ಭಾವೈಕ್ಯ ಹಾಗೂ ಏಕತೆಯ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿದರು. ಕ್ರೀಡಾಂಗಣದಲ್ಲಿ ಸೇರಿದ್ದ ಜನಸ್ತೋಮ ಚಪ್ಪಾಳೆ ತಟ್ಟಿ ಮಕ್ಕಳಿಗೆ ಹುರುಪು ತುಂಬಿತು. ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ‘ದೇಖೋ ದೇಖೋ ಆಕಾಶ್ ಪರ್ ಚಾ ಗಯಾ ಹೈ ಅಬ್ ತಿರಂಗಾ’ ಎಂಬ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಸುಭಾಷ್ ಶಾಲೆಯ ಮಕ್ಕಳು ಸರ್ವಧರ್ಮಗಳ ಸಂದೇಶ ಸಾರುವ ಭಾವೈಕ್ಯ ನೃತ್ಯಕ್ಕೆ ಹೆಜ್ಜೆ ಹಾಕಿದರು. ಮಹಿಳಾ ಸಮಾಜ ಶಾಲೆಯ ಭಾರತ್ ಅಂಡ್ ಸ್ಕೌಟ್ಸ್ ಮಕ್ಕಳು ಪ್ರದರ್ಶಿಸಿದ ದೇಶಭಕ್ತಿಯ ನೃತ್ಯ ನೋಡುಗರನ್ನು ಭಾವುಕರನ್ನಾಗಿಸಿತು. ಆರ್.ವಿ.ಶಾಲೆಯ ಮಕ್ಕಳು ಯೋಧ ನಮನ ‘ರಗ್ ರಗ್ ಮೇ ತೂಫಾನ್’ ನೃತ್ಯ ದೇಶಪ್ರೇಮವನ್ನು ಮತ್ತಷ್ಟು ಹೆಚ್ಚಿಸುವಂತಿತ್ತು. 24 ವಿವಿಧ ಶಾಲೆಗಳ ಸುಮಾರು 2 ಸಾವಿರ ಮಕ್ಕಳು ಪ್ರದರ್ಶಿಸಿದ ಸಾಮೂಹಿಕ ವ್ಯಾಯಾಮ ಗಮನ ಸೆಳೆಯಿತು. ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ನೇಗಿಲಯೋಗಿ ರೈತಗೀತೆಗೆ ಧ್ವನಿಯಾದರು. ತಬಲ ಕಲಾವಿದ ರಮಣ ನೇತೃತ್ವದ ತಂಡ ನಾಡಗೀತೆ ಸೇರಿದಂತೆ ವಿವಿಧ ಹಾಡುಗಳಿಗೆ ಧ್ವನಿಯಾಯಿತು.
-ಕ್ಲಾಕ್ ಟವರ್ ವೃತ್ತದಲ್ಲಿ ಧ್ವಜಾರೋಹಣ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಕೋಲಾರ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕ್ರೇನ್ ಮೂಲಕ ಮೇಲೇರಿ ಧ್ವಜಾರೋಹಣ ಮಾಡಿದರು. ಬಳಿಕ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಉಪವಿಭಾಗಾಧಿಕಾರಿ ಡಾ.ಮೈತ್ರಿ ತಹಶೀಲ್ದಾರ್ ಡಾ.ನಯನಾ ನಗರಸಭೆ ಆಯುಕ್ತ ನವೀನ್ ಚಂದ್ರ ಪೊಲೀಸ್ ಅಧಿಕಾರಿಗಳು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. ಪುಟಾಣಿಗಳು ಜಿಲ್ಲಾಧಿಕಾರಿಗೆ ಸ್ವಾತಂತ್ರೋತ್ಸವದ ಶುಭಾಶಯ ಹೇಳಿದರು ಜೊತೆಗೆ ಫೋಟೊ ತೆಗೆಸಿಕೊಂಡರು.
-ಪಥಸಂಚಲನದ ಬಹುಮಾನ
ಪಥಸಂಚಲನದ ಶಾಲಾ ವಿಭಾಗದಲ್ಲಿ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ಆರ್.ವಿ.ಶಾಲೆ ಹಾಗೂ ಅಂತರಗಂಗಾ ವಿದ್ಯಾಸಂಸ್ಥೆ ಮಕ್ಕಳು ಬಹುಮಾನ ಪಡೆದರು. ಸಮವಸ್ತ್ರ ವಿಭಾಗದಲ್ಲಿ ಆರ್.ವಿ.ಶಾಲಾ ಎನ್‌ಸಿಸಿ ತಂಡ ಸುಭಾಷ್ ಪ್ರೌಢಶಾಲಾ ಭಾರತ್ ಸ್ಕೌಟ್ಸ್ ತಂಡ ಬಹುಮಾನಕ್ಕೆ ಪಾತ್ರವಾದವು. ಪಥಸಂಚಲನದ ಪೊಲೀಸ್ ವಿಭಾಗದಲ್ಲಿ ಪುನೀತ್ ಸಾರಥ್ಯದ ಡಿಎಆರ್ ಮೊದಲ ಸ್ಥಾನ ಪಡೆದರೆ ಪಿಎಸ್‌ಐ ಭಾರತಿ ನೇತೃತ್ವದ ಜಿಲ್ಲಾ ಪೊಲೀಸ್ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಮೂರನೇ ಸ್ಥಾನವನ್ನು ಪಿಎಸ್‌ಐ ಅರುಣ್ ಗೌಡ ಪಾಟೀಲ ನೇತೃತ್ವದ ನಾಗರಿಕ ಪೊಲೀಸ್ ತಂಡ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.