ADVERTISEMENT

ವೇಮಗಲ್‌ | ಕುಡಿದು ಕಿರಿಕ್‌; ಬಿಹಾರ ಕಾರ್ಮಿಕನ ಕೊಲೆ

ಪೊಲೀಸರಿಗೆ ಕರೆ ಮಾಡಿ ಹತ್ಯೆ ವಿಚಾರ ಹೇಳಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:42 IST
Last Updated 27 ಡಿಸೆಂಬರ್ 2025, 6:42 IST
ಸಂದೀಪ್‌ ಸಿಂಗ್
ಸಂದೀಪ್‌ ಸಿಂಗ್   

ಕೋಲಾರ: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದ ಕುರುಗಲ್‌ ಗೇಟ್‌ನಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಕಾರ್ಮಿಕರೊಬ್ಬರನ್ನು ಕೊಲೆ ಮಾಡಲಾಗಿದೆ.

ಬಿಹಾರ ಮೂಲದ ಸಂದೀಪ್‌ ಸಿಂಗ್ ಕೊಲೆಯಾದ ಕಾರ್ಮಿಕ. ಆರೋಪಿಗಳನ್ನು ವೇಮಗಲ್‌ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ರಾತ್ರಿ ಕುರುಗಲ್ ಗೇಟ್ ಬಳಿ ಕಾರ್ಮಿಕ ಸಂದೀಪ್ ಸಿಂಗ್‌ ಅಡುಗೆ ಕೆಲಸ ಮಾಡುತ್ತಿದ್ದ. ಬಳ್ಳಾರಿಯ ರಾಜಾರೆಡ್ಡಿ, ಕಾರ್ಮಿಕರ ಗುತ್ತಿಗೆ ಏಜೆಂಟ್ ಅನಿರುಧ್ ಮತ್ತು ಬೆಂಗಳೂರಿನ ಮನೋಜ್‌ ಎಂಬುವರು ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸಂದೀಪ್‌ ಸಿಂಗ್‌ ಹಾಗೂ ರಾಜಾರೆಡ್ಡಿ ನಡುವೆ ಗಲಾಟೆ ಆರಂಭವಾಗಿದೆ. ಸಂದೀಪ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ ರಾಜಾರೆಡ್ಡಿ ಕೋಪಗೊಂಡಿದ್ದಾನೆ. ಮನೋಜ್‌ ಜೊತೆಗೂಡಿ ಸಂದೀಪ್‌ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಳಿಕ ಗಾಯಾಳುವನ್ನು ಅವರೇ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ. ಈ ವೇಳೆ ಸಂದೀಪ್‌ ಮತ್ತೆ ತಿರುಗಿ ಮಾತನಾಡಿ ಧಮ್ಕಿ ಹಾಕಿದ್ದಾನೆ. ಗಾಯ ಸರಿ ಹೋದ ಮೇಲೆ ತಮ್ಮನ್ನೂ, ಕುಟುಂಬದವರನ್ನೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಆತನ ಮಾತುಗಳು ಆರೋಪಿಗಳನ್ನು ಮತ್ತೆ ಕೆರಳಿಸಿವೆ. ಬೈಕ್‌ನಿಂದ ಇಳಿಸಿ ಸಂದೀಪ್‌ ಸಿಂಗ್‌ ಅವರ ಕುತ್ತಿಗೆ ಕೊಯ್ದಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಕೊಲೆಯ ನಂತರ ಆರೋಪಿಗಳು ಪೊಲೀಸರಿಗೆ ಕರೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಮನೋಜ್, ರಾಜಾರೆಡ್ಡಿ ಹಾಗೂ ಅನಿರುಧ್ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ.ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಕೊಲೆಯಾಗಿ ಒಂಬತ್ತು ಗಂಟೆ ಕಳೆದರೂ ‌ಶವ ತೆಗೆಯಲು ಸಂಬಂಧಿಕರು, ಸ್ನೇಹಿತರು ಯಾರೂ ದೂರು ನೀಡಲು ಬಾರದ ಹಿನ್ನೆಲೆಯಲ್ಲಿ ಪೊಲೀಸರು ಪರದಾಡಿದರು. ನಿಯಮಗಳ ಪ್ರಕಾರ ದೂರುದಾರರ ಸಮ್ಮುಖದಲ್ಲಿ ಶವ ಸ್ಥಳಾಂತರ ಮಾಡಬೇಕು. ಸಂಬಂಧಿಕರು ಬಿಹಾರದವರಾಗಿದ್ದು, ಸ್ಥಳೀಯವಾಗಿಯೂ ಆತನ ಸ್ನೇಹಿತರು ಯಾರೂ ಮುಂದೆ ಬಾರದ ಹಿನ್ನೆಲೆ ಪರಿಣಾಮ ರಸ್ತೆ ಬದಿಯ ಚರಂಡಿಯಲ್ಲೇ ಶವ ಬಿದ್ದಿತ್ತು.

ಗಾಂಜಾ ಮತ್ತಿನಲ್ಲಿ ನಡೆಯಿತೇ ಕೊಲೆ?

ಗಾಂಜಾ ಮತ್ತಿನಲ್ಲಿ ಗಲಾಟೆಯಾಗಿ ಕೊಲೆ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುತ್ತಿರುವ ಗಾಂಜಾ ಮಾರಾಟವೂ ಅದಕ್ಕೆ ಪುರಾವೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೈಗಾರಿಕಾ ಪ್ರದೇಶ ಬೆಳೆಯುತ್ತಿದ್ದು ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕರ್ನಾಟಕವಲ್ಲದೇ ತಮಿಳುನಾಡು ಆಂಧ್ರ ಬಿಹಾರ ಉತ್ತರ ಪ್ರದೇಶ ಒಡಿಶಾ ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಇಲ್ಲಿ ಪೊಲೀಸರ ಸಂಖ್ಯೆಯೂ ಕಡಿಮೆ. ಯುವಕನ ಹತ್ಯೆಗೆ ಗಾಂಜಾ ಸೇವನೆ ಜಗಳ ಕಾರಣ ಎಂಬ ಮಾಹಿತಿಗಳು ಬರುತ್ತಿವೆ. ತನಿಖೆಯಿಂದ ನಿಜ ಗೊತ್ತಾಗಲಿದೆ ಎಂದು ರೈತ ಮುಖಂಡ ಕಲ್ವಮಂಜಲಿ ರಾಮು ಶಿವಣ್ಣ ಹೇಳಿದರು.

ಅನಿರುಧ್
ಮನೋಜ್‌
ರಾಜಾರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.