ADVERTISEMENT

ಕೋಲಾರ| ಈ ಊರಲ್ಲಿ ಸಂಕ್ರಾಂತಿ ಅಂದರೆ ಸೂತಕ!

ಕೆ.ಓಂಕಾರ ಮೂರ್ತಿ
Published 15 ಜನವರಿ 2026, 6:25 IST
Last Updated 15 ಜನವರಿ 2026, 6:25 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ   

ಕೋಲಾರ: ವೀರಗಲ್ಲು ಹಾಗೂ ಶಾಸನಗಳ ತೊಟ್ಟಿಲಂತಿರುವ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಬಂದರೆ ಸೂತಕದ ಛಾಯೆ ಆವರಿಸುತ್ತದೆ. ಊರಿಗೆ ಕೇಡು ಬರುತ್ತದೆ, ಜಾನುವಾರುಗಳು ಸಾಯುತ್ತವೆ ಎಂದು ‌ಈ ಹಬ್ಬ ಆಚರಿಸಲು ಗ್ರಾಮಸ್ಥರು ಭಯಪಡುತ್ತಾರೆ. ಹೀಗಾಗಿ, ನೂರಕ್ಕೂ ಅಧಿಕ ವರ್ಷಗಳಿಂದ ಈ ಗ್ರಾಮದಲ್ಲಿ ಸಂಕ್ರಾಂತಿ ಆಚರಿಸುತ್ತಿಲ್ಲ.

ಗ್ರಾಮದಲ್ಲಿ ಪೂರ್ವಿಕರು ಸಂಕ್ರಾಂತಿ ಆಚರಿಸುವ ವೇಳೆ ದನಕರುಗಳಿಗೆ ಅಲಂಕಾರ ಮಾಡಿ ಬೆಂಕಿ ಹಾಯಿಸಿ ಓಡಿಸಿದರಂತೆ. ಹೀಗೆ ಓಡಿದ ಜಾನುವಾರು ವಾಪಸ್ ಬರಲಿಲ್ಲವಂತೆ. ಅಷ್ಟೇ ಅಲ್ಲ; ಗ್ರಾಮದಲ್ಲಿದ್ದ ದನ ಕರುಗಳು ಇದಕ್ಕಿದ್ದಂತೆ ಸಾಯಲಾರಂಭಿಸಿದವು ಎಂಬ ಪ್ರತೀತಿ ಇದೆ. ಇದರಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು ನಂತರದ ವರ್ಷಗಳಿಂದ ಈ ಹಬ್ಬಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಈ ಹಬ್ಬ ಇಂದಿಗೂ ಅವರ ಪಾಲಿಗೆ ಶೋಕಾಚರಣೆಯೇ ಆಗಿ ಉಳಿದುಕೊಂಡಿದೆ.

‘ಇದು ಮೂಢನಂಬಿಕೆ ಅಥವಾ ಮೌಢ್ಯ ಅಲ್ಲ. ಸಂಕ್ರಾಂತಿ ದಿನ ಗ್ರಾಮದಲ್ಲಿ ನಡೆದ ನಿಜವಾದ ಘಟನೆ. ತಂದೆ, ತಾತ ಕೂಡ ಈ ಮಾತು ಹೇಳುತ್ತಿದ್ದರು. ಅವರು ಕೂಡ ಆಚರಣೆ ಮಾಡುತ್ತಿರಲಿಲ್ಲ. ಅದನ್ನೇ ನಾವು ಕೂಡ ಪಾಲಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಗ್ರಾಮದ ಹಿರಿಯರು.

ADVERTISEMENT

ಹೀಗಾಗಿ, ಸಂಕ್ರಾಂತಿ ದಿನ ಈ ಗ್ರಾಮಸ್ಥರು ಜಾನುವಾರುಗಳ ಮೈ ತೊಳೆಯುವುದಿಲ್ಲ, ಪೂಜೆ ಮಾಡುವು ದಿಲ್ಲ, ಬೆಂಕಿ ಹಾಯಿಸುವುದಿಲ್ಲ, ಹಬ್ಬ ಆಚರಿಸುವುದಿಲ್ಲ, ಎಳ್ಳು ಬೆಲ್ಲ ತಿನ್ನುವುದಿಲ್ಲ. ಬದಲಾಗಿ ಜ.25ರಂದು ಗ್ರಾಮದಲ್ಲಿ ಸೋಮೇಶ್ವರ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸುತ್ತಲಿನ ಗ್ರಾಮಸ್ಥರು, ದೂರದೂರಿನ ನೆಂಟರು ಬರುತ್ತಾರೆ. ಏಳು ದಿನ ನಡೆಯುತ್ತದೆ. ಈ ಅವಧಿಯಲ್ಲಿ ಪಕ್ಕದಲ್ಲೇ ಇರುವ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಳ್ಳುತ್ತದೆ.

ಅರಾಭಿಕೊತ್ತನೂರು ಗ್ರಾಮದಲ್ಲಿ 600 ಮನೆಗಳಿದ್ದು, ಸುಮಾರು 2,800 ಜನಸಂಖ್ಯೆ ಇದೆ. ಗ್ರಾಮದಲ್ಲಿ 20 ದೇಗುಲಗಳಿದ್ದು ತಲೆಮಾರುಗಳಿಂದ ಸಂಕ್ರಾಂತಿ ಹೊರತುಪಡಿಸಿ ಉಳಿದೆಲ್ಲಾ ಹಬ್ಬಗಳಲ್ಲಿ ಸಂಭ್ರಮ ನೆಲೆಸುತ್ತದೆ.

ಊರಿನ ಕೆಲ ಯುವಕರು ಸಂಕ್ರಾಂತಿ ಆಚರಿಸಲು ಪ್ರಯತ್ನಪಟ್ಟಿದ್ದುಂಟು. ಆದರೆ, ಹಿರಿಯರು ಅದಕ್ಕೆ ಅವಕಾಶ ನೀಡಿಲ್ಲ. ಪೂರ್ವಿಕರ ಮಾತು ಆಲಿಸಿಕೊಂಡು ಬಂದಿದ್ದರಿಂದ ಊರು ಸುಭಿಕ್ಷವಾಗಿದೆ. ಮತ್ತೆ ಏನಾದರೂ ಅನಾಹುತ ನಡೆದರೆ ಕಷ್ಟ ಎಂಬ ಕಾರಣ ನೀಡುತ್ತಾರೆ. 

ಪೂರ್ವಿಕರ ಕಾಲದಿಂದಲೂ ನಮ್ಮೂರಿನಲ್ಲಿ ಸಂಕ್ರಾಂತಿ ಆಚರಿಸಲ್ಲ. ಈ ಹಬ್ಬದ ದಿನ ರಾಸುಗಳ ಮೈ ತೊಳೆಯಲ್ಲ ಪೂಜೆ ಮಾಡಲ್ಲ ಮನೆ ಮುಂದೆ ರಂಗೋಲಿ ಬಿಡಲ್ಲ
ನಂಜುಂಡೇಗೌಡ ಗ್ರಾ.ಪಂ ಸದಸ್ಯ ಅರಾಭಿಕೊತ್ತನೂರು
ನನಗೀಗ 68 ವರ್ಷ. ನಾವಂತೂ ಸಂಕ್ರಾಂತಿ ಹಬ್ಬ ಆಚರಿಸಿಲ್ಲ. ಈ ಹಬ್ಬ ಆಚರಿಸಲ್ಲ ಎಂದು ತಂದೆ ತಾತ ಹೇಳುತ್ತಿದ್ದರು. ಹೀಗಾಗಿ ಸಂಕ್ರಾಂತಿ ದಿನ ನಮಗೆ ಹಬ್ಬನೂ ಇಲ್ಲ ಪೂಜೆನೂ ಇಲ್ಲ
ಜೆ.ಕೆ.ನಾರಾಯಣಶೆಟ್ಟಿ ಗ್ರಾಮಸ್ಥ ಅರಾಭಿಕೊತ್ತನೂರು

ಬಸವ ಜಯಂತಿ ಅದ್ದೂರಿ

ಅರಾಭಿಕೊತ್ತನೂರಿನಲ್ಲಿ ಸಂಕ್ರಾಂತಿ ಬದಲಾಗಿ ಬಸವ ಜಯಂತಿಯನ್ನು ಗ್ರಾಮಸ್ಥರು ಅದ್ದೂರಿಯಿಂದ ಆಚರಿಸುತ್ತಾರೆ. ‘ಬಸವ ಜಯಂತಿಯ ದಿನ ರಾಸುಗಳ ಮೈ ತೊಳೆದು ಅಲಂಕಾರ ಮಾಡಿ ಊರಿನ ಬಸವೇಶ್ವರ ಗುಡಿ ಎದುರು ಪೂಜೆ ಮಾಡಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಅಂದು ಸೂತಕ ತೆಗೆಯುತ್ತೇವೆ ಹರಕೆ ತೀರಿಸುತ್ತೇವೆ’ ಎನ್ನುತ್ತಾರೆ ಗ್ರಾಮಸ್ಥ ಆನಂದ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.