ADVERTISEMENT

ಹೆಣ್ಮಕ್ಕಳ ಯಶಸ್ಸಿಗೆ ಶಿಕ್ಷಣವೊಂದೇ ದಾರಿ

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:21 IST
Last Updated 14 ಅಕ್ಟೋಬರ್ 2025, 3:21 IST
ಕೋಲಾರದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಮಂಜುನಾಥ್ ಜಿ.ಎ ಉದ್ಘಾಟಿಸಿದರು
ಕೋಲಾರದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಮಂಜುನಾಥ್ ಜಿ.ಎ ಉದ್ಘಾಟಿಸಿದರು    

ಕೋಲಾರ: ಹೆಣ್ಣು ಮಗುವಿನ ಯಶಸ್ಸಿಗೆ ವಿದ್ಯಾಭ್ಯಾಸವೊಂದೇ ದಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಮಂಜುನಾಥ್ ಜಿ.ಎ ಕಿವಿಮಾತು ಹೇಳಿದರು.

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಸೋಮವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ನಗರದ ಮಿಲ್ಲತ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಧೈರ್ಯದಿಂದ ಜೀವನ ದಾರಿಯಲ್ಲಿ ಯಶಸ್ಸು ಸಾಧಿಸಬೇಕು. ಹೆಣ್ಣಿನ ಕುರಿತು ಕೆಲವರಲ್ಲಿ ಕೀಳರಿಮೆ ಇದೆ. ಆ ಮನೋಭಾವ ಹೋಗಬೇಕು ಎಂದು ಅವರು ಹೆಣ್ಣಿನ ಮಹತ್ವ ತಿಳಿಸಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗಿರುವ ವಿವಿಧ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ನಟೇಶ್, ಬಾಲ್ಯ ವಿವಾಹ ಮತ್ತು ಪೋಕ್ಸೊ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.

ಇಲಾಖೆಯ ನಿರೂಪಣಾಧಿಕಾರಿ ವಿ.ನಾಗರತ್ನ ಮಾತನಾಡಿ, ‘ಬಾಲ್ಯವಿವಾಹ ಸಾಮಾಜಿಕ ಪಿಡುಗು ಆಗಿದ್ದು, ಹೆಣ್ಣು ಮಕ್ಕಳು ಇಂತಹ ವ್ಯವಸ್ಥೆಯನ್ನು ವಿರೋಧಿಸಿ ನಿಲ್ಲಬೇಕು. ಇಂತಹ ಪ್ರಕರಣಗಳು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಂಡು ಬಂದಾಗ 1098ಕ್ಕೆ ಕರೆಮಾಡಬೇಕು. ಈ ಮೂಲಕ ಬಾಲ್ಯವಿವಾಹ ತಡೆದು ಹೆಣ್ಣು ಮಗುವಿನ ಭವಿಷ್ಯ ರೂಪಿಸಿಕೊಳ್ಳಲು ಸಹಾಯ ಮಾಡಬೇಕು’ ಎಂದು ಕೋರಿದರು.

ಇದೇ ಸಂದರ್ಭದಲ್ಲಿ ಸುಮಾರು 400 ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಿಲ್ಲತ್ ವೆಲ್‌ಫೇರ್ ಟ್ರಸ್ಟ್‌ನ ಚೇರ್ಮನ್ ಮತ್ತು ಕ್ಯಾಂಪಸ್ ಡೈರೆಕ್ಟರ್ ಶಫಿಕ್‌ ಅಹಮ್ಮದ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್, ಮಿಷನ್ ಶಕ್ತಿ ಯೋಜನೆಯ ಎಲ್ಲಾ ಸಿಬ್ಬಂದಿ, ಜಿಲ್ಲಾ ಕಚೇರಿಯ ಸಿಬ್ಬಂದಿ ಮತ್ತು ಮಿಲ್ಲತ್ ವೆಲ್‌ಫೇರ್ ಟ್ರಸ್ಟ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.