
ಕೋಲಾರ: ಸಂರಕ್ಷಿತ ಸ್ಮಾರಕ ಎನಿಸಿರುವ ಕೋಲಾರಮ್ಮ ದೇಗುಲದ ಸನಿಹ ನಿರ್ಬಂಧಿತ ಪ್ರದೇಶದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸಿ ನಿಯಮ ಉಲ್ಲಂಘಿಸಿರುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನೋಟಿಸ್ ನೀಡಿದ್ದು, ನಗರದ ಕೋಟೆ ಬೀದಿಯಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿದೆ.
ಎರಡು ತಿಂಗಳ ಹಿಂದೆಯಷ್ಟೇ ಸುಮಾರು ₹ 40.17 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿಯನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿತ್ತು. ಅದಕ್ಕಾಗಿ ಪಕ್ಕದಲ್ಲೇ ಇದ್ದ ಬೃಹತ್ ಸಭಾಂಗಣವನ್ನು ಒಡೆದು ಹಾಕಲಾಗಿತ್ತು.
ಆದರೆ, ನಿಯಮ ಉಲ್ಲಂಘಿಸಿ, ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯದೆ ಕೋಲಾರಮ್ಮ ದೇಗುಲದಿಂದ ನಿರ್ಬಂಧಿತ ಪ್ರದೇಶವಾದ 100 ಮೀಟರ್ ಒಳಗೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸಗೌಡ ಅವರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕೂಡಲೇ ಕೆಲಸ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳ ತಿದ್ದುಪಡಿ ಕಾಯ್ದೆ–2010ರ ಉಲ್ಲಂಘನೆ ಆಗಿದೆ ಎಂದು ಹೇಳಿದ್ದಾರೆ. ಅನುಮತಿ ಪಡೆಯುವ ವಿಚಾರದಲ್ಲಿ ಸಂಪರ್ಕಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ನೋಟಿಸ್‌ನ ಪ್ರತಿಗಳನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್, ಗಲ್‌ಪೇಟೆ ಪೊಲೀಸ್ ಠಾಣೆಗೂ ರವಾನಿಸಿದ್ದಾರೆ.
ಈಗಾಗಲೇ ಸುಮಾರು 12 ಅಡಿ ಗುಂಡಿ ತೆಗೆದು ಅಡಿಪಾಯ ಹಾಕಲು ಗುತ್ತಿಗೆದಾರರು ಸಿದ್ಧತೆ ಮಾಡಿಕೊಂಡಿದ್ದರು. ಐದು ಮಹಡಿ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದರು.
ಕೋಲಾರಮ್ಮ ದೇಗುಲದ 60 ಮೀಟರ್ ದೂರದ ವ್ಯಾಪ್ತಿ ಪ್ರದೇಶದಿಂದಲೇ ಈಗ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸುಮಾರು 40 ಮೀಟರ್ ವ್ಯಾಪ್ತಿಯ 120 ಅಡಿ ವಿಸ್ತೀರ್ಣದ ಜಾಗದಲ್ಲಿ ಕಾಮಗಾರಿ ನಡೆದಿದೆ ಎಂಬುದು ಗೊತ್ತಾಗಿದೆ.
ಸದ್ಯದಲ್ಲೇ ಬಂದು ಸರ್ವೇ ಮಾಡುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ಕಾಲೇಜಿನ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ದೇಶದ ಪರಂಪರೆ, ಸ್ಮಾರಕಗಳನ್ನು ರಕ್ಷಿಸಿ ಉಳಿಸುವ ಉದ್ದೇಶದಿಂದ ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳ ತಿದ್ದುಪಡಿ ಕಾಯ್ದೆ–2010 ಜಾರಿ ತರಲಾಗಿದೆ.
ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಆರೋಪ ಕೋಲಾರಮ್ಮ ದೇಗುಲದ ಸಮೀಪ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ದೇಗುಲದಿಂದ 60 ಮೀಟರ್ ವ್ಯಾಪ್ತಿಯಿಂದಲೇ ಶುರುವಾಗಿರುವ ಕಾಮಗಾರಿ
ಮಹಿಳಾ ಕಾಲೇಜಿನಲ್ಲಿ ಕೊಠಡಿ ಕೊರತೆ ಇದೆ. 3 ಸಾವಿರ ವಿದ್ಯಾರ್ಥಿನಿಯರಿದ್ದು ಎರಡು ಪಾಳಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಬೇಗ ಕಟ್ಟಡ ನಿರ್ಮಾಣವಾದರೆ ಮಕ್ಕಳಿಗೆ ಅನುಕೂಲವಾಗಲಿದೆಪ್ರೊ.ಶ್ರೀನಿವಾಸಗೌಡ ಪ್ರಾಂಶುಪಾಲ ಮಹಿಳಾ ಸರ್ಕಾರಿ ಕಾಲೇಜು
ಎರಡು ತಿಂಗಳ ಹಿಂದೆ ಶಂಕುಸ್ಥಾಪನೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಎರಡು ತಿಂಗಳ ಹಿಂದೆಯಷ್ಟೇ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ ನೆರವೇರಿಸಿದ್ದರು. ಈ ಕಾಲೇಜು ಅಭಿವೃದ್ಧಿಗೆ ₹43.67 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಮೊದಲ ಹಂತದ ಕಾಮಗಾರಿಗೆ ₹21.17 ಕೋಟಿ ಎರಡನೇ ಹಂತದ ಕಾಮಗಾರಿಗೆ ₹20 ಕೋಟಿ ಮತ್ತು ಮೂರನೇ ಹಂತದಲ್ಲಿ ಪಿ.ಜಿ ಬ್ಲಾಕ್ ಹಾಗೂ ಸೈನ್ಸ್ ಬ್ಲಾಕ್‍ನ ಮೊದಲ ಮತ್ತು ಎರಡನೇ ಮಹಡಿಗಳ ನಿರ್ಮಾಣಕ್ಕಾಗಿ ₹2.50 ಕೋಟಿ ಅನುದಾನ ಮೀಸಲಿಡಲಾಗಿದೆ.
ಸಂಸದರು ಗಮನ ಹರಿಸುವವರೇ? ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೇಂದ್ರ ಸರ್ಕಾರದಡಿ ಬರುವು ಕಾರಣ ಸಂಸದ ಎಂ.ಮಲ್ಲೇಶ್ ಬಾಬು ಅವರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಕಾಲೇಜಿನ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. ಕಾಲೇಜಿನಲ್ಲಿ ಸುಮಾರು ಮೂರು ಸಾವಿರ ಹೆಣ್ಣು ಮಕ್ಕಳು ಕಲಿಯುತ್ತಿದ್ದು ಕೊಠಡಿಗಳ ಕೊರತೆ ಎದುರಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಹಣವೂ ಬಿಡುಗಡೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಮತ್ತಷ್ಟು ತೊಡಕುಂಟಾದರೆ ಇನ್ನಷ್ಟು ದಿನ ತೊಂದರೆ ಉಂಟಾಗಲಿದೆ ಎಂದು ಹೇಳಿದ್ದಾರೆ.
ಕಾಲೇಜಿನ ದಾಖಲೆಗಳೇ ಇರಲಿಲ್ಲ ಮಹಿಳಾ ಸರ್ಕಾರಿ ಕಾಲೇಜಿಗೆ ಹಲವು ವರ್ಷಗಳ ಇತಿಹಾಸವಿದೆ. ಅಂಥ ಕಾಲೇಜಿನ ಆಸ್ತಿ ಸಂಬಂಧ ದಾಖಲೆಗಳೇ ಇರಲಿಲ್ಲ. ದಾಖಲೆ ಇಲ್ಲದ ಕಾರಣ ಕಟ್ಟಡ ನಿರ್ಮಾಣಕ್ಕೆ ತೊಂದರೆ ಆಗಿತ್ತು. ಶಾಸಕ ಕೊತ್ತೂರು ಮಂಜುನಾಥ್ ಎಂಎಲ್‌ಸಿ ಅನಿಲ್ ಕ ಕುಮಾರ್ ನಗರಸಭೆ ಅಧ್ಯಕ್ಷರಾಗಿದ್ದ ಲಕ್ಷ್ಮಿದೇವಮ್ಮ ಅವರು ಪೌರಾಯುಕ್ತ ನವೀನ್ ಚಂದ್ರ ತಹಶೀಲ್ದಾರ್ ನಯನಾ ಗಮನಕ್ಕೆ ತಂದು ಈಚೆಗೆ ಇ–ಖಾತೆ ಮಾಡಿಕೊಟ್ಟಿದ್ದಾರೆ.
100 ಮೀಟರ್ ವ್ಯಾಪ್ತಿ ನಿರ್ಬಂಧಿತ ಪ್ರದೇಶ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳ ತಿದ್ದುಪಡಿ ಕಾಯ್ದೆ–2010ರ (The ancient monuments and archaeological sites and remains-amendment and validation-act 2010) ಪ್ರಕಾರ ಸಂರಕ್ಷಿತ ಪುರಾತನ ಸ್ಮಾರಕಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇದನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. 200 ಮೀಟರ್ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶ (ರೆಗ್ಯೊಲೇಟೆಡ್) ಘೋಷಿಸಿದೆ. ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಕಟ್ಟಡ ನಿರ್ಮಿಸುವುದಾದರೆ ಅಥವಾ ನವೀಕರಣ ಮಾಡುವುದಾದರೆ ನಿರಾಕ್ಷೇಪಣಾ ಪತ್ರ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವೂ ಇದೆ. ಸಂರಕ್ಷಿತ ಸ್ಮಾರಕ ಎನಿಸಿರುವ ಕೋಲಾರಮ್ಮ ದೇಗುಲದ ಬಳಿ ಮಹಿಳಾ ಸರ್ಕಾರಿ ಕಾಲೇಜು ಇದೆ. ಹೊಸ ಕಟ್ಟಡ ನಿರ್ಮಾಣ ಮಾಡುವ ಮುನ್ನ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.