
ಕೆಜಿಎಫ್: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್) ದಿಂದ ಮಾರಿಕುಪ್ಪಂಗೆ ಹೋಗುವ ರೈಲಿನ ಸೇವೆಯನ್ನು ಕೂಡಲೇ ಪುನರಾರಂಭಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಮಲ್ಲೇಶಬಾಬು ವಿಭಾಗೀಯ ರೈಲ್ವೆ ಮ್ಯಾನೇಜರ್ ಅಶುತೋಷ್ ಕೆ.ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಮಾರಿಕುಪ್ಪಂ ನಿಲ್ದಾಣಕ್ಕೆ ಸಂಜೆ 5ಕ್ಕೆ ತಲುಪುತ್ತಿದ್ದ ರೈಲು ಸಾವಿರಾರು ಮಂದಿ ಪ್ರಯಾಣಿಕರಿಗೆ ವರದಾನವಾಗಿತ್ತು. ನಂತರ ರೈಲನ್ನು ವೈಟ್‌ಫೀಲ್ಡ್‌ನಿಂದ ಶುರು ಮಾಡಿರುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಕೆಎಸ್‌ಆರ್‌ನಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಇದೇ ಸಮಯದಲ್ಲಿ ಹೊರಡುವ ಬೃಂದಾವನ್ ರೈಲಿನ ಮೊರೆ ಹೋಗಿದ್ದು, ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ. ಜೊತೆಗೆ ದಿನನಿತ್ಯ ಸಂಚರಿಸುವವರಿಗೆ ದುಬಾರಿ ಪ್ರಯಾಣವಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕೆಎಸ್‌ಆರ್– ಮಾರಿಕುಪ್ಪಂ ರೈಲನ್ನು ಕೆಎಸ್‌ಆರ್ ರೈಲು ನಿಲ್ದಾಣದಿಂದ ಹೊರಡುವ ರೀತಿ ವ್ಯವಸ್ಥೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.