ಪ್ರಜಾವಾಣಿ ವಾರ್ತೆ
ಮುಳಬಾಗಿಲು: ‘ಖಾಸಗಿ ಬಸ್ ಮೇಲೆ ನಿತ್ಯ ಪ್ರಯಾಣ, ಬಸ್ ಕೊರತೆ’ ಹಾಗೂ ಹೆಚ್ಚುವರಿ ಬಸ್ ಸಂಚಾರಕ್ಕೆ ಪ್ರಯಾಣಿಕರ ಆಗ್ರಹ ಎಂದು ಆಗಸ್ಟ್ 23ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಒಂದೇ ದಿನದಲ್ಲಿ ಬಹುದಿನಗಳ ಸಮಸ್ಯೆ ಪರಿಹರಿಸಿದ್ದಾರೆ.
ಮುಳಬಾಗಿಲು ನಗರದಿಂದ ಎನ್.ವಡ್ಡಹಳ್ಳಿ, ಬೈರಕೂರು ಮಾರ್ಗವಾಗಿ ಹೆಬ್ಬಣಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಬೆಳಗ್ಗೆ ಹಾಗೂ ಸಂಜೆ ಬಸ್‌ಗಳ ಕೊರತೆ ಕಾಡುತ್ತಿದ್ದರಿಂದ ಖಾಸಗಿ ಬಸ್‌ಗಳಲ್ಲಿ ಕಿಕ್ಕಿರಿದು ಸಂಚರಿಸುವುದರ ಜೊತೆಗೆ ಬಸ್ ಟಾಪ್, ಬಸ್‌ನ ಬಾಗಿಲುಗಳಲ್ಲಿ (ಫುಟ್ ಬೋರ್ಡ್) ಸಂಚರಿಸುತ್ತಿದ್ದರು.
ಈ ವಿಚಾರವಾಗಿ ಶನಿವಾರ ಸುದ್ದಿ ಪ್ರಕಟವಾಗುತ್ತಿದ್ದಂತೆ ಕೆ.ಎಸ್.ಆರ್.ಟಿ.ಸಿ ಜಿಲ್ಲಾಧಿಕಾರಿ ಎನ್.ಶ್ರೀನಾಥ್ ಹಾಗೂ ಮುಳಬಾಗಿಲು ಘಟಕದ ವ್ಯವಸ್ಥಾಪಕ ಅನ್ಸರ್ ಪಾಷ ಶನಿವಾರ ಬೆಳಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಎರಡು ಬಸ್ ಹೆಚ್ಚುವರಿಯಾಗಿ ಮಾರ್ಗಕ್ಕೆ ಕಳುಹಿಸುತ್ತಿರುವುದಾಗಿ ತಿಳಿಸಿದರು.
ಬಸ್ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು ಕೂಡಲೇ ಬಸ್ ಒದಗಿಸುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ. ಸಮಸ್ಯೆ ಪರಿಹರಿಸುತ್ತಿರುವುದಾಗಿ ಅನ್ಸರ್ ಪಾಷ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ಎನ್.ಶ್ರೀನಾಥ್ ದೂರವಾಣಿ ಮೂಲಕ ಮಾತನಾಡಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶನಿವಾರದಿಂದಲೇ ಹೆಬ್ಬಣಿ ಹಾಗೂ ಮುಳಬಾಗಿಲು ಕಡೆಗೆ ಬೆಳಿಗ್ಗೆ 8.30 ಹಾಗೂ ಸಂಜೆ ಮುಳಬಾಗಿಲಿನಿಂದ ಹೆಬ್ಬಣಿ ಕಡೆಗೆ 6 ಗಂಟೆಗೆ ಎರಡು ಬಸ್‌ಗಳನ್ನು ಮಾರ್ಗದಲ್ಲಿ ಸಂಚರಿಸಲು ಬಿಡಲಾಗುತ್ತಿದೆ ಎಂದು ಹೇಳಿದರು.
ಪತ್ರಿಕೆಯಲ್ಲಿ ಪ್ರಕಟವಾದ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಎಂ.ಆರ್.ರವಿ ಕೂಡ ಸೂಚನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.