ADVERTISEMENT

ಕೆಜಿಎಫ್‌: ಸೋರಿದ ಬಸ್‌ ಚಾವಣಿ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:40 IST
Last Updated 21 ಸೆಪ್ಟೆಂಬರ್ 2025, 7:40 IST
ಕೆಜಿಎಫ್‌ನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸೋರುತ್ತಿದ್ದರಿಂದ ಪ್ರಯಾಣಿಕರು ಬಸ್‌ನಲ್ಲಿ ನಿಂತು ಪ್ರಯಾಣಿಸುವಂತಾಯಿತು 
ಕೆಜಿಎಫ್‌ನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸೋರುತ್ತಿದ್ದರಿಂದ ಪ್ರಯಾಣಿಕರು ಬಸ್‌ನಲ್ಲಿ ನಿಂತು ಪ್ರಯಾಣಿಸುವಂತಾಯಿತು    

ಕೆಜಿಎಫ್‌: ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮೇಲ್ಚಾವಣಿ ಸೋರುತ್ತಿತ್ತು. ಇದರಿಂದಾಗಿ ಬಸ್‌ನಲ್ಲಿ ಪ್ರಯಾಣುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ರಾಬರ್ಟ್‌ಸನ್‌ಪೇಟೆಯ ಕೆಜಿಎಫ್‌ ಬಸ್‌ ಡಿಪೊಗೆ ಸೇರಿದ ಬಸ್‌ ಗುರುವಾರ ರಾತ್ರಿ ಚೆನ್ನೈಗೆ ಹೊರಟಿತ್ತು. ಆಗ ನಗರ ಸೇರಿದಂತೆ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿತ್ತು. ತಮಿಳುನಾಡು ಪ್ರವೇಶಿಸುತ್ತಿದ್ದಂತೆಯೇ ಮಳೆ ನೀರು ಬಸ್‌ನ ಮೇಲ್ಚಾವಣಿಯಿಂದ ಪ್ರಯಾಣಿಕರ ಮೇಲೆ ಸುರಿಯಲಾರಂಭಿಸಿತು. ಬಸ್‌ ಮೇಲ್ಚಾವಣಿ ಸೋರಲಾರಂಭಿಸಿದಾಗ, ಪ್ರಯಾಣಿಕರು ಒಂದು ಸೀಟ್‌ ಬಿಟ್ಟು ಮತ್ತೊಂದು ಖಾಲಿ ಇದ್ದ ಸೀಟ್‌ಗಳಿಗೆ ಹೋಗಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆದರೆ ಬರುಬರುತ್ತಾ ಇಡೀ ಬಸ್‌ ಸೋರಲಾರಂಭಿಸಿತು. ಪ್ರಯಾಣಿಕರು ತಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಲಾಗದೆ, ಎಲ್ಲಿ ಹನಿ ಬೀಳದ ಸ್ಥಳ ಹುಡುಕುತ್ತಾ, ಅತ್ತಿಂದಿತ್ತ ತಿರುಗಾಡುತ್ತಿದ್ದರು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದರು. 

ಬಸ್‌ ಸೀಟ್‌ ಮೇಲೆ ಇರುವ ಲಗೇಜ್ ಸ್ಥಳದಲ್ಲಿಯೂ ಸೋರಲಾರಂಭಿಸಿದ್ದರಿಂದ ಪ್ರಯಾಣಿಕರು ಲಗೇಜನ್ನು ತೊಡೆ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳಬೇಕಾಯಿತು. ಹಲವು ಪ್ರಯಾಣಿಕರು ತಲೆ ಮೇಲೆ ಬಟ್ಟೆ ಹೊದ್ದುಕೊಂಡು ಮಳೆಯ ನೀರಿನ ಸೋರಿಕೆಯಿಂದ ಪಾರಾಗಲು ಯತ್ನಿಸಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ADVERTISEMENT

ಬಸ್‌ ಪ್ರಯಾಣಿಕರ ಪ್ರತಿಭಟನೆ ನಂತರ ತಮಿಳುನಾಡಿನ ಪೆರ್ನಾಂಪೆಟ್‌ನಲ್ಲಿ ತಮಿಳುನಾಡಿನ ಬಸ್ ಡಿಪೊದಲ್ಲಿ ವೈಪರ್ ದುರಸ್ತಿಗೆ ಯತ್ನಿಸಲಾಯಿತು. ಆದರೆ ಸೋರಿಕೆ ತಡೆಗಟ್ಟಲು ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ, ವೇಲೂರಿನಲ್ಲಿದ್ದ ಕರ್ನಾಟಕದ ಮತ್ತೊಂದು ಬಸ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. 

ಬಸ್‌ ಸುಸ್ಥಿತಿಯಲ್ಲಿ ಇಲ್ಲದಿದ್ದರೂ, ಮಳೆಗಾಲದಲ್ಲಿ ರಾತ್ರಿ ಪ್ರಯಾಣಕ್ಕೆ ಬಸ್‌ ಕಳುಹಿಸಿದ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಬಸ್‌ಗಳು ಸುಸ್ಥಿತಿಯಲ್ಲಿರುತ್ತವೆ. ಕೆಎಸ್‌ಆರ್‌ಟಿಸಿ ಮಾತ್ರ ಹಳೆಯ ಬಸ್‌ಗಳನ್ನೇ ಅಂತರರಾಜ್ಯಕ್ಕೆ ಓಡಿಸುತ್ತಿದೆ ಎಂದು ಆಗಾಗ್ಗೆ ಚೆನ್ನೈಗೆ ಪ್ರಯಾಣ ಮಾಡುವ ಪ್ರಯಾಣಿಕರು ತಿಳಿಸಿದ್ದಾರೆ.

ಟಾರ್‌ ಶೀಟ್‌ ಅಳವಡಿಕೆ

ಬಸ್‌ನ ವೈಪರ್‌ ಅನಿರೀಕ್ಷಿತವಾಗಿ ತುಂಡಾದ ಪರಿಣಾಮ ಸ್ವಲ್ಪ ತೊಂದರೆಯಾಯಿತು. ಬಸ್‌ಗೆ ಟಾರ್‌ ಶೀಟ್‌ ಅಳವಡಿಸಲಾಗಿತ್ತು. ಆದರೂ ಸೋರಿದ್ದು ಹೇಗೆ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ. ಪ್ರಯಾಣಿಕರ ಕಷ್ಟ ಅರಿತು ತಮಿಳುನಾಡಿನಲ್ಲಿಯೇ ಬದಲಿ ಬಸ್‌ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರಯಾಣಿಕರು ನಿಗದಿತ ಸಮಯಕ್ಕೆ ಚೆನ್ನೈಗೆ ತಲುಪಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕಿ ನೇತ್ರಾವತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.