ADVERTISEMENT

ಮುಳಬಾಗಿಲು: ಸೌಲಭ್ಯ ವಂಚಿತ ರಾಜ್ಯದ ಅತಿದೊಡ್ಡ ಟೊಮೆಟೊ ಮಾರುಕಟ್ಟೆ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 26 ಫೆಬ್ರುವರಿ 2024, 5:56 IST
Last Updated 26 ಫೆಬ್ರುವರಿ 2024, 5:56 IST
ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಟೊಮೆಟೊ ಮಾರುಕಟ್ಟೆ
ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಟೊಮೆಟೊ ಮಾರುಕಟ್ಟೆ    

ಮುಳಬಾಗಿಲು: ರಾಜ್ಯದಲ್ಲಿಯೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾದ ಎನ್.ವಡ್ಡಹಳ್ಳಿ ಮಾರುಕಟ್ಟೆ ಪ್ರತಿದಿನ ನೂರಾರು ಲೋಡ್‌ಗಳಷ್ಟು ಟೊಮೆಟೊವನ್ನು ದೇಶದ ನಾನಾ ರಾಜ್ಯಗಳಿಗೆ ರಫ್ತು ಮಾಡುತ್ತದೆ. ಇದರಿಂದ ಇಲಾಖೆಗೆ ಲಕ್ಷಾಂತರ ರೂಪಾಯಿ ಲಾಭವೂ ಬರುತ್ತಿದೆ. ಆದರೆ, ಮಾರುಕಟ್ಟೆಗೆ ಪರಿಪೂರ್ಣವಾದ ಸೌಲಭ್ಯ ಇಲ್ಲದಂತಾಗಿದೆ.

ಟೊಮೆಟೊ ಮಾರುಕಟ್ಟೆಯಲ್ಲಿ 63 ಮಂಡಿಗಳಿವೆ. ಪ್ರತಿದಿನ ಸುಮಾರು 50 ರಿಂದ 60 ಲೋಡ್‌  ಟೊಮೆಟೊ ದೇಶದ ಮೂಲೆ ಮೂಲೆಗಳಿಗೆ ರಫ್ತಾಗುತ್ತದೆ. ಇದರಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೈತರು, ವ್ಯಾಪಾರಿಗಳು ಬಂದು ಹೋಗುತ್ತಿದ್ದರೂ ಮೂಲ ಸೌಕರ್ಯ ಇಲ್ಲದೆ ಇರುವುದರಿಂದ ಜನ ಪರದಾಡುವಂತಾಗಿದೆ.

ಇನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ, ದೆಹಲಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಇಲ್ಲಿನ ಮಾರುಕಟ್ಟೆಯಿಂದ ಟೊಮೆಟೊ ರಫ್ತಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ರೈತರಿಗೆ ವಿಶ್ರಾಂತಿ ಭವನ, ಸೂಕ್ತ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಮಾರುಕಟ್ಟೆ ಒಳಗೆ ಸೂಕ್ತವಾದ ರಸ್ತೆ, ಮಾರುಕಟ್ಟೆಗೆ ಕಾಂಪೌಂಡ್, ಮಾರುಕಟ್ಟೆ ಕಸ ವಿಲೇವಾರಿ ಘಟಕ, ವಿದ್ಯುತ್, ಹೀಗೆ ನಾನಾ ಸಮಸ್ಯೆಗಳು ಇರುವುದರಿಂದ ಮಾರುಕಟ್ಟೆ ಸಮಸ್ಯೆಗಳಿಂದ ಕೂಡಿದೆ.

ADVERTISEMENT

ಮಾರುಕಟ್ಟೆ ದಿನೇ ದಿನೇ ಬೆಳೆಯುತ್ತಲೇ ಇದೆ‌. ಆದರೆ, ಮಾರುಕಟ್ಟೆಯಲ್ಲಿ ಇರುವ ಎಲ್ಲ ಮಂಡಿಗಳಿಗೂ ಎಪಿಎಂಸಿ ಅಧಿಕಾರಿಗಳು ಅಂಗಡಿ ವ್ಯವಸ್ಥೆ( ಟೊಮೆಟೊ ಹಾಕುವ ಸ್ಥಳ) ಮಾಡದೆ ಇರುವುದರಿಂದ ಸುಮಾರು ಮಂಡಿಗಳನ್ನು ಮಾರುಕಟ್ಟೆ ಪಕ್ಕದ ಖಾಸಗಿ ಜಮೀನಿನಲ್ಲಿ ಇಡುವಂತಾಗಿದೆ.

ಟೊಮೆಟೊ ಈ ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ವಾಣಿಜ್ಯ ಬೆಳೆ. ವರ್ಷದ ಮಾರ್ಚ್, ಏಪ್ರಿಲ್, ಮೇ, ಜೂನ್ ಹಾಗೂ ಜುಲೈ ತಿಂಗಳುನಲ್ಲಿ ಟೊಮೆಟೊ ಗರಿಷ್ಠ ದರಕ್ಕೆ ಮಾರಾಟ ಆಗುತ್ತದೆ.

ಮಾರುಕಟ್ಟೆಗಿಲ್ಲ ಕಾಂಪೌಂಡ್: ದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿದ್ದರೂ ಮಾರುಕಟ್ಟೆಗೆ ಇದುವರೆಗೂ ಸುಸಜ್ಜಿತವಾದ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರ ಸರಕು, ವ್ಯಾಪಾರಿಗಳ ವಾಹನಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.

ಶೌಚಾಲಯ ಕೊರತೆ: ಇನ್ನು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರು, ಪುರುಷರು ಮತ್ತು ಮಹಿಳೆಯರು ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಆದರೆ, ಪ್ರತ್ಯೇಕವಾದ ಶೌಚಾಲಯ ಕಟ್ಟಡ ಇದ್ದರೂ ಸಂಖ್ಯೆಗೆ ಅನುಗುಣವಾಗಿ ಇಲ್ಲ. ಸರಿಯಾದ ನಿರ್ವಹಣೆ, ನೀರಿನ ಕೊರತೆಯಿಂದ ಹಾಳಾಗಿವೆ.

ಸಾವಿರಾರು ಮಂದಿಗೆ ಏಕೈಕ ನೀರಿನ ಘಟಕ: ಇನ್ನು ಮಾರುಕಟ್ಟೆಯಲ್ಲಿ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಜನರಿಗೆ ಸಾಕಾಗುತ್ತಿಲ್ಲ.

ಮಳೆ ಬಂದರೆ ಕೆಸರು ಗದ್ದೆ: ಮಾರುಕಟ್ಟೆಯಲ್ಲಿ ಸರಿಯಾದ ರಸ್ತೆ ಹಾಗೂ ಕಾಂಕ್ರೀಟ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ಬಂದರೆ ಎಲ್ಲಿ ನೋಡಿದರೂ ಕೆಸರು ತುಂಬಿರುತ್ತದೆ. ಇದರಿಂದ ಮಳೆಗಾಲದಲ್ಲಿ ವಾಹನಗಳು ಎಲ್ಲಿ ಜಾರಿ ಬೀಳುತ್ತವೆಯೋ ಎಂಬ ಭಯದಲ್ಲಿ ಸಂಚರಿಸಿದರೆ ವ್ಯಾಪಾರಿಗಳು ಮತ್ತು ಕೂಲಿ ಆಳುಗಳು ಕೆಸರಿನಲ್ಲಿಯೇ ಓಡಾಡುವ ಸ್ಥಿತಿ ಇದೆ.

ರೈತರಿಗಿಲ್ಲ ವಿಶ್ರಾಂತಿ ಭವನ: ಮಾರುಕಟ್ಟೆಗೆ ಬರುವ ರೈತರಿಗೆ ಸೂಕ್ತವಾದ ವಿಶ್ರಾಂತಿ ಭವನ ಇಲ್ಲ. ಬಿಸಿಲು, ಗಾಳಿ ಮಳೆಯಲ್ಲಿ ನಿಲ್ಲಬೇಕಾಗಿದೆ. ಆದರೆ, ಇತ್ತೀಚೆಗೆ ಎಪಿಎಂಸಿ ಕಚೇರಿ ಪಕ್ಕದಲ್ಲಿಯೇ ಒಂದು ಪ್ರಾಂಗಣ  ಮಾಡಿದರೂ ಅದರಲ್ಲಿ ನಾನಾ ಬಗೆಯ ವಸ್ತುಗಳನ್ನು ಇಡುವ ಕಾರಣದಿಂದ ವಿಶಾಲವಾದ ಸ್ಥಳಾವಕಾಶ ಇಲ್ಲವಾಗಿದೆ.

ಇದುವರೆಗೂ ನಿರ್ಮಾಣ ಆಗದ ಕಸ ವಿಲೇವಾರಿ ಘಟಕ: ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಬೀಳುವ ತ್ಯಾಜ್ಯ, ಬೆಲೆ ಇಲ್ಲದ ಸಮಯದಲ್ಲಿ ಹೊರಗಡೆ ಕೊಳೆತ ಮತ್ತು ಮಾರಾಟವಾಗದ ಟೊಮೆಟೊ ಸುರಿಯಲು ಆಲಂಗೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಐದು ಎಕರೆ ಕಸ ವಿಲೇವಾರಿ ಘಟಕಕ್ಕೆ ಸ್ಥಳಾವಕಾಶ ಗುರುತಿಸಲಾಗಿದೆ. ಆದರೆ, ಇದುವರೆಗೂ ಕಸ ವಿಲೇವಾರಿ ಘಟಕ ನಿರ್ಮಾಣ ಆಗದೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಆಲಂಗೂರು ರಸ್ತೆ ಪಕ್ಕದಲ್ಲಿ ಕಸ ಸುರಿಯಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಸೇರಿರುವ ನೂರಾರು ಬಾಕ್ಸ್‌ಗಳ ಟೊಮೆಟೊ

ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಇಕ್ಕಟ್ಟಾದ ಶೌಚಾಲಯ

ಕಸ ವಿಲೇವಾರಿ ಘಟಕಕ್ಕೆ ಗುರುತಿಸಿರುವ ಜಮೀನಿನಲ್ಲಿ ಗಿಡಗಂಟಿ ಬೆಳೆದಿರುವುದು
ರಾಜ್ಯದಲ್ಲಿಯೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾದ ಎನ್.ವಡ್ಡಹಳ್ಳಿಯಲ್ಲಿ ಪ್ರತಿನಿತ್ಯ ದೇಶದ ವಿವಿಧ ಕಡೆ ಟೊಮೆಟೊ ರಫ್ತಾಗುತ್ತದೆ. ಬೆಲೆ ಕಡಿಮೆಯಾದಾಗ ಎಲ್ಲೆಂದರಲ್ಲಿ ಟೊಮೆಟೊ ಸುರಿಯಬೇಕಾದ ಸ್ಥಿತಿ ಇದೆ
-ನಗವಾರ ಎನ್.ಆರ್.ಸತ್ಯಣ್ಣ ಮಂಡಿ ಮಾಲೀಕ
ಮಾರುಕಟ್ಟೆ ಪ್ರಾರಂಭವಾದಾಗಿನಿಂದಲೂ ಮೂಲ ಸೌಲಭ್ಯಗಳ ಸಮಸ್ಯೆ ಎದುರಾಗುತ್ತಲೇ ಇದೆ. ಮೂಲ ಸೌಕರ್ಯ ಇಲ್ಲದೆ ಜನ ಪರದಾಡುತ್ತಿದ್ದಾರೆ. ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ
-ಯಲುವಹಳ್ಳಿ ಪ್ರಭಾಕರ್ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಮಾರುಕಟ್ಟೆ ಕಸ ವಿಲೇವಾರಿ ಘಟಕಕ್ಕೆ ಈಗಾಗಲೇ ಆಲಂಗೂರು ರಸ್ತೆಯಲ್ಲಿ ಐದು ಎಕರೆ ಗುರುತಿಸಲಾಗಿದೆ. ತಾಲ್ಲೂಕು ಕಚೇರಿಯಿಂದ ಕಸ ವಿಲೇವಾರಿ ಘಟಕದ ಜಮೀನು ಸರ್ವೆ ಕಾರ್ಯ ನಡೆಯಬೇಕಾಗಿದೆ
-ಎಚ್.ಹರೀಶ್ ಎಪಿಎಂಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.