ಮಾಲೂರು: ಸುಮಾರು 700 ಮನೆಗಳನ್ನು ಹೊಂದಿರುವ ಮಾಲೂರಿನ 2ನೇ ವಾರ್ಡ್ ಹಲವು ಸಮಸ್ಯೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. 220 ವಿದ್ಯುತ್ ಹೈಟೆನ್ಷನ್ ಲೈನ್ ಸಮಸ್ಯೆ ಎದುರಿಸುವ ಜೊತೆಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ.
ಮಾಲೂರಿನ 27 ವಾರ್ಡ್‌ಗಳ ಪೈಕಿ 2ನೇ ವಾರ್ಡ್ 2000ಕ್ಕೂ ಹೆಚ್ಚು ಮತದಾರರನ್ನು ಒಳಗೊಂಡಿದ್ದು, ಬಹುತೇಕ ಕೂಲಿ ಕಾರ್ಮಿಕರೇ ಆಗಿದ್ದಾರೆ. ಆದರೆ, ವಾರ್ಡ್‌ನಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ವಾರ್ಡ್‌ಗೆ ಪುರಸಭೆ ವತಿಯಿಂದ 15 ದಿನಗಳಿಗೊಮ್ಮೆ ಅರ್ಧ ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ದಿನಗಳಲ್ಲಿ ಈ ವಾರ್ಡ್‌ನಲ್ಲಿ ವಾಸಿಸುವ ಜನರು ಕುಡಿಯುವ ಮತ್ತು ದಿನಬಳಕೆ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ.
ಇನ್ನು ವಾರ್ಡ್‌ನಲ್ಲಿ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಬೀದಿ ದೀಪಗಳ ಅವಸ್ಥೆಯಂತೂ ಕೇಳುವವರೇ ಇಲ್ಲ ಎಂಬಂತಾಗಿದೆ. ವಾರ್ಡ್‌ನ ಯಾವುದೇ ರಸ್ತೆಯಲ್ಲಿ ಕಣ್ಣಿಗೆ ಕಸದ ರಾಶಿಗಳೇ ರಾಚುತ್ತದೆ. ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಿಗಳಲ್ಲಿ ಹಳೆಯ ಕಾಲದಲ್ಲಿ ಹಾಕಿದ ವಿದ್ಯುತ್ ದೀಪಗಳು ಕಂಡುಬರುತ್ತವೆ. ಅವು ಹೊತ್ತಿ ಉರಿದು ತಿಂಗಳುಗಳೇ ಕಳೆದಿದ್ದು, ಅಸ್ತಿಪಂಜರದ ರೀತಿ ವಿದ್ಯುತ್ ಕಂಬಗಳಲ್ಲಿ ನೇತಾಡುತ್ತಿರುತ್ತವೆ ಎಂದು ಸ್ಥಳೀಯರು ದೂರುತ್ತಾರೆ.
ನೊಣ, ಸೊಳ್ಳೆಗಳದ್ದೇ ಕಾಟ: ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳನ್ನು ಹಾಕಲಾಗಿದ್ದು, ನೊಣ ಮತ್ತು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಮನೆಗಳ ಬಳಿ ಖಾಲಿ ಇರುವ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವು ಸೇರಿದಂತೆ ಇನ್ನಿತರ ಹುಳು–ಹುಪ್ಪಟೆಗಳ ಕಾಟ ಹೆಚ್ಚಾಗಿದೆ. ಪ್ರತಿದಿನ ಪುರಸಭೆಯ ಕಸ ಸಂಗ್ರಹಿಸುವ ವಾಹನ ವಾರ್ಡ್‌ಗೆ ಬಾರದಿರುವುದೇ, ವಾರ್ಡ್‌ನಲ್ಲಿ ಕಸವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಲು ಕಾರಣವಾಗಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ವಾರಗಳಿಗೆ ಒಮ್ಮೆ ಪುರಸಭೆಯ ವಾಹನ ಕಸ ಸಂಗ್ರಹಿಸಲು ವಾರ್ಡ್‌ಗೆ ಬರುತ್ತದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.
220 ಹೈಟೆನ್ಷನ್ ವಿದ್ಯುತ್ ತಂತಿ: ವಾರ್ಡ್‌ನ ಹೃದಯ ಭಾಗದಲ್ಲಿ ಹಾದು ಹೋಗಿರುವ 220 ಹೈಟೆನ್ಷನ್ ವಿದ್ಯುತ್ ತಂತಿಯಿಂದ ವಾರ್ಡ್‌ನ ಜನರು ಜೀವ ಕೈಯಲ್ಲಿಡಿದು, ಜೀವಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯ ನಾಗರಿಕರು ಅವಲತ್ತುಕೊಳ್ಳುತ್ತಾರೆ. ಆಂಧ್ರಪ್ರದೇಶದ ಕಡಪದಿಂದ ಮಾಲೂರು ಮಾರ್ಗವಾಗಿ ಪಟ್ಟಣದ ಎರಡನೇ ವಾರ್ಡ್‌ನಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಯು ಬೆಂಗಳೂರಿನ ಹೂಡಿಗೆ ಸಂಪರ್ಕ ಹೊಂದಿದೆ ಎನ್ನಲಾಗುತ್ತಿದೆ. ಇಲ್ಲಿ ಹೈಟೆನ್ಷನ್ ಹಾದು ಹೋಗಿರುವ ತಂತಿಯ ಕೆಳಗೆ ಮುಖ್ಯ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎನ್ನುತ್ತಾರೆ ಸ್ಥಳೀಯರು.
‘ಹೈಟೆನ್ಷನ್ ತಂತಿಗಳಿಂದ ಆಗುವ ಅನಾಹುತದ ಬಗ್ಗೆ ಜನಸಾಮಾನ್ಯರಿಗೆ ಬೆಸ್ಕಾಂ ವತಿಯಿಂದ ಜಾಗೃತಿ ಮೂಡಿಸಬೇಕು’ ಎಂದು ವಾರ್ಡ್‌ನ ಪುರಸಭೆ ಸದಸ್ಯ ಜಾಕೀರ್ ಹುಸೇನ್ ಒತ್ತಾಯಿಸುತ್ತಾರೆ.
ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ಹೋಂಡಾ ಮೋಟಾರ್ ಕಂಪನಿಯಿಂದ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ಆದರೆ, ಅದು ಕೆಟ್ಟು ನಿಂತು ತಿಂಗಳುಗಳೇ ಕಳೆದಿದ್ದರೂ, ಇನ್ನೂ ದುರಸ್ತಿ ಮಾಡಿಲ್ಲ. ಇನ್ನು ಪುರಸಭೆ ವತಿಯಿಂದ 2016–17ರಲ್ಲಿ ₹6.50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವು ಈಗವರೆಗೆ ಜನಸಾಮಾನ್ಯರ ಬಳಕೆಗೆ ಮುಕ್ತವಾಗಿಲ್ಲ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಈ ಶೌಚಾಲಯಗಳು ಇದೀಗ ಮತ್ತೆ ಶಿಥಿಲಾವಸ್ಥೆ ತಲುಪಿವೆ ಎಂಬುದು ನಾಗರಿಕರ ಆರೋಪ.
ವಾರ್ಡ್‌ನಲ್ಲಿ ಸುಮಾರು 700 ಮನೆಗಳಿವೆ. ಆದರೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಪುರಸಭೆ ಸ್ವಚ್ಛತಾ ಕೆಲಸ ಮಾಡುತ್ತಿಲ್ಲ. ಇದರಿಂದ ನಗರದಲ್ಲೆಲ್ಲಾ ಕಸದ ರಾಶಿ ತುಂಬಿಕೊಂಡಿದ್ದು ಸೊಳ್ಳೆ ಮತ್ತು ನೊಣಗಳ ಆವಾಸ ಸ್ಥಾನವಾಗಿದೆಚಂದ್ರಪ್ಪ ರಾಜೀವ ನಗರ ನಿವಾಸಿ
ರಾಜೀವ್ ನಗರವು ಮಾಲೂರಿನಿಂದ ಮುಕ್ಕಾಲು ಕಿ.ಮೀ ದೂರದಲ್ಲಿದೆ. ಆದರೆ ಇಲ್ಲಿ ಸರ್ಕಾರಿ ಶಾಲೆಯೇ ಇಲ್ಲ. ಪ್ರತಿದಿನ ಸುಮಾರು 150 ಮಕ್ಕಳು ಮಾಲೂರಿನಲ್ಲಿರುವ ಸರ್ಕಾರಿ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆಅರುಣ್ ರಾಜೀವ ನಗರದ ನಿವಾಸಿ
ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಕರ್ಯಗಳು ಮರೀಚಿಕೆಯಾಗಿವೆ. ಖಾಸಗಿ ವಾಹನಗಳಲ್ಲಿ ಬರುವ ನೀರನ್ನು ಖರೀದಿಸಿ ಕುಡಿಯಬೇಕಿದೆ. ಮನೆಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು ಹಾವುಗಳ ಕಾಟ ಹೆಚ್ಚಿದೆಪಾರ್ವತಮ್ಮ ರಾಜೀವ ನಗರ ನಿವಾಸಿ
ಪುರಸಭೆ ವತಿಯಿಂದ 2016–17ರಲ್ಲಿ ₹6.50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವೇ ಆಗಿಲ್ಲ. ಈಗ ಶೌಚಾಲಯ ಕಟ್ಟಡ ಶಿಥಿವಾಗುತ್ತಿದೆಸೀತಾ ರಾಜೀವ ನಗರದ ನಿವಾಸಿ
220 ಹೈಟೆನ್ಷನ್ ವಿದ್ಯುತ್ ತಂತಿಗಳು ಪಟ್ಟಣದ 2ನೇ ವಾರ್ಡಿನಲ್ಲಿ ಹಾದುಹೋಗಿದೆ. ಇಲ್ಲಿನ ನಾಗರಿಕರು ಬಹಳ ಎಚ್ಚರಿಕೆಯಿಂದ ಇರಬೇಕು. 220 ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳಗೆ ರಸ್ತೆ ನಿರ್ಮಾಣ ಮಾಡಿರುವುದು, ಬಹಳ ಅಪಾಯಕಾರಿಯಾಗಿದೆ. ಹೆಚ್ಚು ಭಾರ ತುಂಬಿದ ಲಾರಿ ಮತ್ತು ಟ್ರಕ್‌ಗಳು ಈ ರಸ್ತೆಯಲ್ಲಿ ಓಡಾಡಬಾರದು. ವಿದ್ಯುತ್ ತಂತಿಗಳ ಅಕ್ಕಪಕ್ಕದ ಮನೆಗಳ ನಿವಾಸಿಗಳು ಯಾವುದೇ ಕಟ್ಟಡ ನಿರ್ಮಾಣ, ದುರಸ್ಥಿ ಮಾಡಬೇಕಾದರೆ ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡಬೇಕು. ಇಲ್ಲಿನ ನಾಗರಿಕರು ಹೈಟೆನ್ಷನ್ ತಂತಿಗಳಿಂದ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳಬೇಕು.
ಅನ್ಸರ್ ಪಾಷ, ಎಇಇ, ಬೆಸ್ಕಾಂ
ಪಟ್ಟಣದ 27 ವಾರ್ಡ್‌ಗಳ ಪೈಕಿ ಎರಡನೇ ವಾರ್ಡ್‌ನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ವಿಚಾರ ಗೊತ್ತಾಗಿದೆ. ವಾರ್ಡ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪುರಸಭೆಯಿಂದ ನೂತನವಾಗಿ ಕಸ ವಿಲೇವಾರಿ ಘಟಕ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ 2ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಕಸವನ್ನು ತೆರವುಗೊಳಿಸಲಾಗುವುದು. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಪೂರೈಸಲಾಗುವುದು
ರಾಜಣ್ಣ, ಪುರಸಭೆ ಆರೋಗ್ಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.