ADVERTISEMENT

ಜಿಲ್ಲೆಯಲ್ಲಿ ಭಾಷಾ ಚಳವಳಿ ದಾರಿ ತಪ್ಪಿದೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಕಳವಳ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 12:45 IST
Last Updated 24 ಏಪ್ರಿಲ್ 2019, 12:45 IST
ಜಿಲ್ಲಾ ರಾಜ್‌ಕುಮಾರ್ ಅಭಿಮಾನಿಗಳ ಸಂಘವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿದರು.
ಜಿಲ್ಲಾ ರಾಜ್‌ಕುಮಾರ್ ಅಭಿಮಾನಿಗಳ ಸಂಘವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿದರು.   

ಕೋಲಾರ: ‘ಈ ಹಿಂದೆ ರಾಜ್ಯದಲ್ಲಿ ಕನ್ನಡದ ಪರ ಯಾವುದೇ ಚಳವಳಿ ನಡೆದರೂ ಅದಕ್ಕೆ ಜಿಲ್ಲೆಯಲ್ಲಿ ಶಕ್ತಿಯಾಗಿ ಹೋರಾಟ ನಡೆಯುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಭಾಷಾ ಚಳವಳಿ ದಾರಿ ತಪ್ಪಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ರಾಜ್‌ಕುಮಾರ್ ಅಭಿಮಾನಿಗಳ ಸಂಘವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಚಳವಳಿಗಳಿಗೆ ಮತ್ತೆ ಶಕ್ತಿ ತುಂಬುವ ಕೆಲಸ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕು’ ಎಂದು ಆಶಿಸಿದರು.

‘ನಗರದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಗಂಣಕ್ಕೆ ರಾಜ್‌ಕುಮಾರ್‌ರ ಹೆಸರು ನಾಮಕಾರಣ ಮಾಡಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿದೆ. ಈ ಸಂಬಂಧ ಲೋಕಸಭಾ ಚುನಾವಣಾ ನೀತಿಸಂಹಿತೆ ಅಂತ್ಯಗೊಂಡ ನಂತರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಒತ್ತಾಯ ಮಾಡೋಣ. ಇದಕ್ಕೆ ಪರಿಷತ್‌ನಿಂದ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ನರಾಸಪುರ ಮತ್ತು ವೇಮಗಲ್ ಭಾಗದಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಡಿ ದರ್ಜೆಯ ಹುದ್ದೆ ನೀಡಲಾಗಿದೆ. ಎ ಮತ್ತು ಬಿ ದರ್ಜೆಯ ಹುದ್ದೆ ದೊರೆಯಬೇಕಾದರೆ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಬರಬೇಕು. ಇದಕ್ಕಾಗಿ ಜಿಲ್ಲೆಯಿಂದಲೇ ಹೋರಾಟ ಆರಂಭಿಸುವ ಅಗತ್ಯವಿದೆ’ ಎಂದರು.

‘ರಾಜ್ಯದಲ್ಲಿ ಗೋಕಾಕ್ ಚಳವಳಿ ನಡೆದಾಗ ಅದಕ್ಕೆ ಶಕ್ತಿಯಾಗಿ ಕೋಲಾರ ಜಿಲ್ಲೆಯಲ್ಲಿ ಹೋರಾಟ ನಡೆಯಿತು. ಈ ಹಿಂದೆ ರಾಜ್ಯ, ಭಾಷೆಯ ಉಳುವಿಗಾಗಿ ಚಳವಳಿ ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಹೋರಾಟಗಾರರ ಬದುಕಿನ ಭಾಗವಾಗಿ ಚಳವಳಿ ನಡೆಯತ್ತಿರುವುದು ವಿಷಾದಕರ’ ಎಂದು ಬೇಸರ ವ್ಯಕ್ತಪಡಿಸಿದರು.

ಫಲಾನುಭವಿಯ ಭಾಗ: ‘ಈ ಹಿಂದೆ ಹೋರಾಟಗಳು ಜನರ ಸಮಸ್ಯೆಗೆ ಧ್ವನಿಯಾಗುತ್ತಿದ್ದವು. ಆದರೆ, ಈಗ ಫಲಾನುಭವಿಯ ಭಾಗವಾಗುತ್ತಿವೆ’ ಎಂದು ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ ವಿಷಾದಿಸಿದರು.

‘ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಮುಚ್ಚಿ ಹೋಗುತ್ತಿವೆ. ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಶೈಕ್ಷಣಿಕ ಅರ್ಹತೆ ಇದ್ದರೂ ವಿದ್ಯಾವಂತರು ವಂಚನೆಗೆ ಒಳಗಾಗುತ್ತಿದ್ದಾರೆ. ಸರ್ಕಾರಿ ಉದ್ಯೋಗಾವಕಾಶ ಕಡಿತವಾಗುತ್ತಿರುವ ದಿನಗಳಲ್ಲಿ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಸಿಗದಿದ್ದರೆ ಹೇಗೆ? ಇದಕ್ಕೆ ಹೋರಾಟ ರೂಪಿಸಬೇಕು’ ಎಂದು ಸಲಹೆ ನೀಡಿದರು.

ಹೋರಾಟಗಾರರಿಗೆ ಸನ್ಮಾನ: ಕನ್ನಡಪರ ಹೋರಾಟಗಾರರಾದ ಎ.ಜಿ.ಗುರುಶಾಂತಪ್ಪ ಅವರಿಗೆ ಕನ್ನಡ ಕಟ್ಟಾಳು ಹಾಗೂ ಅಶ್ವತ್ಥಪ್ಪ ಅವರಿಗೆ ಅಭಿಮಾನಿ ಕನ್ನಡಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಜ್‌ಕುಮಾರ್‌ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು.

ರಾಜ್ಯ ಸರಕು ಸಾಗಣೆ ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ಗೌರವ ಸಲಹೆಗಾರ ಅಂಚೆ ಅಶ್ವತ್ಥ್‌, ಜಾಗೃತಿ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಧನರಾಜ್, ಕನ್ನಡ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ವಿಷ್ಣು, ಭಾರತ ಸೇವಾ ದಳದ ಅಧ್ಯಕ್ಷ ಕೆ.ಎಸ್.ಗಣೇಶ್, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಪ್ರಭಾಕರ್, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.