ADVERTISEMENT

ಸಿಜೆಐ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಕೋಲಾರ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:21 IST
Last Updated 17 ಅಕ್ಟೋಬರ್ 2025, 7:21 IST
ಕೋಲಾರದಲ್ಲಿ ಬಂದ್‌ಗೆ ಪೂರ್ವಭಾವಿಯಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಖಂಡರು ಗುರುವಾರ ಬೈಕ್‌ ರ‍್ಯಾಲಿ ನಡೆಸಿದರು
ಕೋಲಾರದಲ್ಲಿ ಬಂದ್‌ಗೆ ಪೂರ್ವಭಾವಿಯಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಖಂಡರು ಗುರುವಾರ ಬೈಕ್‌ ರ‍್ಯಾಲಿ ನಡೆಸಿದರು   

ಕೋಲಾರ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಪೀಠದತ್ತ ಈಚೆಗೆ ವಕೀಲರೊಬ್ಬರು ಶೂ ಎಸೆದ ಪ್ರಕರಣ ಖಂಡಿಸಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟಗಳು ಶುಕ್ರವಾರ (ಅ.17) ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್‌ ನಡೆಸುತ್ತಿವೆ.

ಬಂದ್‌ಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು, ಶಾಂತಿಯುತವಾಗಿ ನಡೆಸಿ ಯಶಸ್ವಿಗೊಳಿಸಬೇಕು ಎಂದು ಒಕ್ಕೂಟ ಮುಖಂಡರು ಮನವಿ ಮಾಡಿದ್ದಾರೆ.

ಈ ಸಂಬಂಧ ಗುರುವಾರ ಸಂಜೆ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಬೈಕ್‌ ರ‍್ಯಾಲಿ ಮಾಡಿ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ನಚಿಕೇತನ ನಿಲಯದಿಂದ ಹೊರಟ ರ‍್ಯಾಲಿಯು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.

ADVERTISEMENT

ಮುಖಂಡರಾದ ಪಂಡಿತ್‌ ಮುನಿವೆಂಕಟಪ್ಪ, ಟಿ.ವಿಜಯಕುಮಾರ್‌, ಅಬ್ಬಣಿ ಶಿವಪ್ಪ, ಗಾಂಧಿನಗರ ನಾರಾಯಣಸ್ವಾಮಿ, ಸಿ.ವಿ.ನಾಗರಾಜ್‌, ವರದೇನಹಳ್ಳಿ ವೆಂಕಟೇಶ್‌, ಅನ್ವರ್ ಪಾಷಾ ಸೇರಿದಂತೆ ಹಲವರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಬಳಿ ಪ್ರತಿಭಟನಕಾರರು ಸೇರಲಿದ್ದಾರೆ. ನಂತರ ಬಸ್‌ ನಿಲ್ದಾಣದ ವೃತ್ತಕ್ಕೆ ಬರಲಿದ್ದಾರೆ. 10.30ಕ್ಕೆ ಮೆರವಣಿಗೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅರ್ಜಿ ನೀಡಿ ಬಂದ್‌ಗೆ ಅವಕಾಶ ಕೋರಿದ್ದೇವೆ. ಇನ್ನು ಕೆಎಸ್‌ಆರ್‌ಟಿಸಿ, ಡಿಡಿಪಿಐ, ಹೋಟೆಲ್‌ ಸಂಘ, ವರ್ತಕರು, ಆಟೊ ಸಂಘದವರಿಗೆ ಅರ್ಜಿ ನೀಡಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.

’ವಕೀಲ ರಾಕೇಶ್‌ ಕಿಶೋರ್‌ ಎಂಬಾತ ಶೂ ಎಸೆದ ಪ್ರಕರಣವು ಸರ್ವೋಚ್ಛ ನ್ಯಾಯಾಲಯ ಪೀಠಕ್ಕೆ, ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ಭಾರತದ 140 ಕೋಟಿ ಜನರಿಗೆ ಮಾಡಿದ ಅವಮಾನವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ’ ಎಂದು ದೂರಿದ್ದಾರೆ.

ಸಂವಿಧಾನ ‌ರಕ್ಷಣೆಗಾಗಿ ಈ ಹೋರಾಟ ನಡೆಯುತ್ತಿದೆ. ಪಕ್ಷಭೇದವಿಲ್ಲದ ಹೋರಾಟ ನಡೆಯಲಿದೆ. ದಲಿತರ‌ ಮೇಲಾಗಲಿ, ನ್ಯಾಯಾಲಯದ ಮೇಲಾಗಲಿ ಇಂಥ ದೌರ್ಜನ್ಯ ಯಾವತ್ತೂ ನಡೆಯಬಾರದು ಎಂದಿದ್ದಾರೆ.

ರೈತ, ಮಹಿಳೆ, ದಲಿತ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.

ಕೋಲಾರದಲ್ಲಿ ಬಂದ್‌ಗೆ ಪೂರ್ವಭಾವಿಯಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಖಂಡರು ಗುರುವಾರ ಬೈಕ್‌ ರ‍್ಯಾಲಿ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.