ADVERTISEMENT

ಆಟದಿಂದ ಕಲಿತ ಕಲಿಕೆ ಶಾಶ್ವತ: ವಿ.ರೂಪಾ

​ಪ್ರಜಾವಾಣಿ ವಾರ್ತೆ
Published 6 ಮೇ 2022, 10:50 IST
Last Updated 6 ಮೇ 2022, 10:50 IST
ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಶಾಲೆಯಲ್ಲಿ ಶುಕ್ರವಾರ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಂಡರು
ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಶಾಲೆಯಲ್ಲಿ ಶುಕ್ರವಾರ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಂಡರು   

ಕೋಲಾರ: ‘ಆಟದಿಂದ ಕಲಿತ ಕಲಿಕೆ ಶಾಶ್ವತವಾಗಿ ಉಳಿಯುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಶಿಬಿರವು ಜೀವನ ಕೌಶಲಗಳನ್ನು ರೂಪಿಸುವ ಶಿಕ್ಷಣವಾಗಿದೆ’ ಎಂದು ಮುದುವಾಡಿ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ವಿ.ರೂಪಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಶಾಲೆಯಲ್ಲಿ ಶುಕ್ರವಾರ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಕಾಸ ಹೊಂದಲು ಬೇಸಿಗೆ ಶಿಬಿರಗಳು ಸಹಕಾರಿ. ಮಕ್ಕಳು ಬೇಸಿಗೆ ರಜೆಯಲ್ಲಿ ಕಾಲಹರಣ ಮಾಡದೆ ಶಿಬಿರಗಳಲ್ಲಿ ಭಾಗವಹಿಸಿ ಕ್ರಿಯಾಶೀಲರಾಗಬೇಕು’ ಎಂದರು.

‘ವಿದ್ಯಾರ್ಥಿ ದಿಸೆಯಿಂದಲೇ ದೈಹಿಕ ಕಸರತ್ತು ಮತ್ತು ಯೋಗವನ್ನು ‌ಜೀವನದ ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತ ಹಾಗೂ ಸಂಭ್ರಮಿಸಿದ ದಿನಗಳು ಜೀವನಪೂರ್ತಿ ನೆನಪಿನಲ್ಲಿ ಉಳಿಯಲಿವೆ. ಮಕ್ಕಳು ಸುತ್ತಲಿನ ಪರಿಸರವನ್ನು ಪ್ರೀತಿಸುವ ಹಾಗೂ ಪೋಷಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಭವಿಷ್ಯಕ್ಕೆ ಬೇಕಾದ ಜೀವನ ಕೌಶಲಗಳನ್ನು ಕಲಿತು ಉತ್ತಮ ನಾಗರಿಕರಾಗಬೇಕು. ಇಂತಹ ಶಿಬಿರಗಳಿಂದ ಸಹಬಾಳ್ವೆ, ಸಹಕಾರ ಮನೋಭಾವ ಹಾಗೂ ನಾಯಕತ್ವ ಗುಣ ಮೈಗೂಡಲಿದೆ’ ಎಂದು ತಿಳಿಸಿದರು.

‘ಎಲ್ಲಾ ಹಂತದ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಪಡೆಯಲು ಪೋಷಕರ ಸಹಕಾರ ಮತ್ತು ಪ್ರೋತ್ಸಾಹ ಅತ್ಯವಶ್ಯಕ. ಪೋಷಕರು ಮಕ್ಕಳನ್ನು ಈ ಶಿಬಿರದಲ್ಲಿ ತೊಡಗಿಸಬೇಕು’ ಎಂದು ಸ್ಕೌಟ್ಸ್ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ಮನವಿ ಮಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ಬಾಬು, ಜಂಟಿ ಕಾರ್ಯದರ್ಶಿ ಉಮಾದೇವಿ, ಶಾಲಾ ಶಿಕ್ಷಕರಾದ ನಾರಾಯಣಸ್ವಾಮಿ, ಪುಷ್ಪಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.