ADVERTISEMENT

ಪ್ರಾಣ ಕಾಪಾಡಿಕೊಳ್ಳಲು ಹೆಲ್ಮೆಟ್ ಹಾಕಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 15:27 IST
Last Updated 24 ಏಪ್ರಿಲ್ 2019, 15:27 IST
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಗುರುರಾಜ್ ಶಿರೋಳ್ ಪ್ರಮಾಣ ಪತ್ರ ವಿತರಿಸಿದರು.
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಗುರುರಾಜ್ ಶಿರೋಳ್ ಪ್ರಮಾಣ ಪತ್ರ ವಿತರಿಸಿದರು.   

ಕೋಲಾರ: ಚಾಲನಾ ಪರವಾನಗಿ ಹಾಗೂ ವಿಮೆ ಇಲ್ಲದೇ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಗುರುರಾಜ್ ಶಿರೋಳ್ ತಿಳಿಸಿದರು.

ತಾಲ್ಲೂಕಿನ ಹೊನ್ನೇನಹಳ್ಳಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು - ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಹನ ಅಪಘಾತಗಳಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಎಷ್ಟು ಮಂದಿಗೆ ನೋವುಂಟಾಗುತ್ತದೆ ಎಂದು ಯೋಜನೆ ಮುಂಚೆಯೇ ಇರಬೇಕು ಎಂದರು.

ಸಾಕಷ್ಟು ಪ್ರಕರಣಗಳಲ್ಲಿ ಸವಾರರು ಚಾಲನಾ ಪರವಾನಗಿಯೇ ಹೊಂದಿರುವುದಿಲ್ಲ. ತಲೆಗೆ ಹೆಲ್ಮೆಟ್ ಹಾಕದೆ ಎಷ್ಟೋ ದ್ವಿಚಕ್ರ ಸವಾರರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ಹೆಲ್ಮೆಟ್ ಹಾಕುವ ಬದಲು ಪ್ರಾಣ ಕಾಪಾಡಿಕೊಳ್ಳಲು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಹಲವಾರು ಮಂದಿ ವಾಹನಗಳಿಗೆ ವಿಮೆ ಮಾಡಿಸಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅಪಘಾತವೇನಾದರೂ ಆದರೆ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ರೂಢಿಗತವಾಗಿ ಬಂದಿರುವ ಕಟ್ಟುಪಾಡುಗಳನ್ನು ಪಾಲಿಸದಿದ್ದರೆ ಶಿಕ್ಷೆ ಇಲ್ಲ. ಆದರೆ ಶಾಸನಾತ್ಮಕವಾಗಿ ರಚಿತವಾಗಿರುವ ಕಾನೂನುಗಳನ್ನು ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಲ್ಲದೇ ಹೋದರೆ ದಂಡ ಹಾಗೂ ಶಿಕ್ಷೆ ಎರಡಕ್ಕೂ ಒಳಗಾಗಬೇಕಾಗುತ್ತದೆ ಎಂದರು.

ಪಿಎಂಇಜಿಪಿ ಯೋಜನೆಯಡಿ ಸಾಲ ಪಡೆದುಕೊಂಡವರು ಅಸಕ್ತವಿರುವ ಉದ್ಯಮ ಪ್ರಾರಂಭಿಸಿ. ಹಂತ ಹಂತವಾಗಿ ಅಭಿವೃದ್ದಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಯೋಜನೆಯ ಉದ್ದೇಶವನ್ನು ಕಾಪಾಡಬೇಕು. ಕೇವಲ ಸಬ್ಸಿಡಿ ಹಣಕ್ಕಾಗಿ ಮಾತ್ರ ಯೋಜನೆಗಳಿಗೆ ಅರ್ಜಿ ಹಾಕಬಾರದು ಎಂದು ತಿಳಿಸಿದರು.

ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಸಹಾಯಕ ನಿರ್ದೇಶಕ ವಿಲಾಸ್ ರಾಮೋನಿ ಮರಾಠೆ ಮಾತನಾಡಿ, ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆಯ ಮೂಲ ಉದ್ದೇಶ ಸ್ವ ಉದ್ಯೋಗ ಸೃಷ್ಟಿ ಮಾಡುವುದು. ನಿರುದ್ಯೋಗಿಗಳಿಗೆ ಸ್ವ ಉದ್ಯೋಗದ ಮೂಲಕ ಅವಕಾಶ ಕಲ್ಪಿಸಿ ಮುಖ್ಯವಾಹಿನಿಗೆ ತರಲಾಗುತ್ತದೆ' ಎಂದರು.

ತರಬೇತಿ ಸಂಸ್ಥೆಯ ನಿರ್ದೇಶಕ ರಮಕಾಂತ್ ಬಿ.ಯಾದವ್, ತರಬೇತುದಾರರಾದ ಕೆ.ವಿ.ವಿಜಯ್ ಕುಮಾರ್, ಎನ್.ಗಿರೀಶ್ ರೆಡ್ಡಿ, ಎನ್.ವಿ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.