ADVERTISEMENT

ಸೌಹಾರ್ದತೆಗೆ ಕಾನೂನು ಅರಿವು ಮೂಡಿಸಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 14:27 IST
Last Updated 27 ಸೆಪ್ಟೆಂಬರ್ 2019, 14:27 IST

ಕೋಲಾರ: ‘ಗ್ರಾಮೀಣ ಪ್ರದೇಶದಲ್ಲಿ ಶಾಂತಿ, ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಹರಟಿ ಗ್ರಾಮ ಪಂಚಾಯಿತಿ ಮತ್ತು ಜಾಗೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಹರಟಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕಾನೂನು ಅರಿವು ನೀಡುವುದು ಪ್ರಾಧಿಕಾರದ ಉದ್ದೇಶ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಮಹಿಳೆಯರು, ಅಂಗವಿಕಲರು ಹಾಗೂ ಬಿಪಿಎಲ್ ಪಡಿತರದಾರರಿಗೆ ಉಚಿತ ಕಾನೂನು ನೆರವು ಸಿಗದೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಅನಕ್ಷರತೆ ಮತ್ತು ಕಾನೂನಿನ ಅರಿವಿಲ್ಲದ ಕಾರಣ ಜನರ ನಡುವೆ ಪರಸ್ಪರ ದ್ವೇಷ, ಭಿನ್ನಾಭಿಪ್ರಾಯ ಮೂಡಿ ಕಲಹವಾಗುತ್ತಿದೆ. ಇದನ್ನು ತಪ್ಪಿಸಲು ಪ್ರಾಧಿಕಾರ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಿದೆ. ಬಾಲ್ಯವಿವಾಹ, ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಕಾನೂನಿನ ಅರಿವಿಲ್ಲದೆ ತಪ್ಪು ನಡೆಯುತ್ತದೆ. ಸಂತ್ರಸ್ತರು ಆರ್ಥಿಕ ಶಕ್ತಿಯಿಲ್ಲದೆ ನೋವು ಸಹಿಸಿಕೊಂಡು ಬದುಕು ಸಾಗಿಸುವಂತಾಗಿದೆ. ಪ್ರಾಧಿಕಾರ ಇಂತಹವರಿಗೆ ಕಾನೂನು ನೆರವು ನೀಡಿ ಧೈರ್ಯ ತುಂಬುತ್ತಿದೆ’ ಎಂದು ವಿವರಿಸಿದರು.

ಪರಿಹಾರಕ್ಕೆ ಸಂಕಷ್ಟ: ‘ವಾಹನ ಚಾಲನೆ ಮಾಡುವವರ ಬಳಿ ಚಾಲನಾ ಪರವಾನಗಿ, ರಹದಾರಿಪತ್ರ, ವಾಹನ ವಿಮೆ ಪಾವತಿ ದಾಖಲೆಪತ್ರ ಇರಬೇಕು. ವಾಹನ ವಿಮೆ ಮಾಡಿಸದೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ಸಿಗದೆ ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್ ಹೇಳಿದರು.

ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದ ವಕೀಲ ಕೆ.ಆರ್.ಧನರಾಜ್, ‘ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಇದರಲ್ಲಿ ಪೋಕ್ಸೊ ಕಾಯ್ದೆ ಒಂದಾಗಿದೆ. ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆಗೆ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಮಕ್ಕಳಿಗೆ ಉಚಿತ ನೆರವು ಸಿಗುತ್ತದೆ’ ಎಂದು ವಿವರಿಸಿದರು.

ವಕೀಲ ನಾರಾಯಣಸ್ವಾಮಿ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.