ADVERTISEMENT

ಗ್ರಂಥಾಲಯ ಮಾಹಿತಿ ಕೊಡುವ ಸಂಗ್ರಹಾಲಯ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-ದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 14:09 IST
Last Updated 29 ನವೆಂಬರ್ 2019, 14:09 IST
ಕೋಲಾರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.   

ಕೋಲಾರ: ‘ನಾವೆಲ್ಲ ಮಾಹಿತಿಯ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಗ್ರಂಥಾಲಯವು ಎಲ್ಲಾ ಮಾಹಿತಿ ಕೊಡುವ ಸಂಗ್ರಹಾಲಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ತಂತ್ರಜ್ಞಾನ ಬೆಳೆದಂತೆ ಬದಲಾವಣೆ ಸಹಜ. ವ್ಯಕ್ತಿತ್ವ ವಿಕಸನ ಹೊಂದಿದಂತೆ ಅನೇಕ ವಿಚಾರ ತಿಳಿದುಕೊಳ್ಳುತ್ತೇವೆ’ ಎಂದು ಹೇಳಿದರು.

‘ಒಂದೆಡೆಯಿಂದ ಮತ್ತೊಂದು ಕಡೆ ಸಂಚರಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಗ್ರಂಥಾಲಯದಲ್ಲಿ ಜ್ಞಾನಾರ್ಜನೆಗೆ ಅನೇಕ ಲೇಖಕರ ಪುಸ್ತಕಗಳು, ನಿಯತಕಾಲಿಕೆಗಳು ಲಭ್ಯವಿವೆ. ಪ್ರಚಲಿತ ವಿದ್ಯಮಾನ ತಿಳಿದುಕೊಂಡು ಕುಳಿತಲ್ಲಿಯೇ ಜ್ಞಾನ ವೃದ್ಧಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ADVERTISEMENT

‘ಈ ಹಿಂದೆ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗುತ್ತಿತ್ತು. ಆದರೆ, ಈಗಿನ ತಂತ್ರಜ್ಞಾನದ ಯುಗದಲ್ಲಿ ಶೈಕ್ಷಣಿಕ ಅರ್ಹತೆಯ ಜತೆಗೆ ಕೌಶಲ ಬಹಳ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಸ್ಥರಾಗಲು ಕೌಶಲ ಮುಖ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ಕೌಶಲ ಶಿಕ್ಷಣ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಯೋಜನೆ ರೂಪಿಸುತ್ತಿದೆ: ‘9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೌಶಲ ಶಿಕ್ಷಣ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಭವಿಷ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗ ಅವಕಾಶಗಳಿಗೆ ಅನುಗುಣವಾಗಿ ಯುವ ಸಂಪನ್ಮೂಲ ಅಣಿಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶ’ ಎಂದು ಮಾಹಿತಿ ನೀಡಿದರು.

‘ಈಗಿರುವ ಹಾಗೂ ಭವಿಷ್ಯದಲ್ಲಿ ಬೇಕಿರುವ ಕೌಶಲಕ್ಕಾಗಿ ಯಾವ ಮಾದರಿಯ ಶಿಕ್ಷಣ ಮುಖ್ಯ ಎಂಬುದನ್ನು ಶಿಕ್ಷಣ ತಜ್ನರು ನೀಡುವ ಸಲಹೆ ಆಧರಿಸಿ ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೆಲ ಶಾಲೆಗಳಲ್ಲಿ ಕೌಶಲ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದು ದೊಡ್ಡ ಮಟ್ಟದಲ್ಲಿ ಆರಂಭವಾಗುತ್ತದೆ’ ಎಂದು ವಿವರಿಸಿದರು.

‘ಕಂದಾಯ ಇಲಾಖೆಯಲ್ಲಿನ 62 ಮಂದಿ ಗ್ರಾಮ ಲೆಕ್ಕಿಗರ ಹುದ್ದೆಗೆ 24 ಸಾವಿರ ಅರ್ಜಿ ಬಂದಿವೆ. ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡಲು ಆಗುವುದಿಲ್ಲ. ವಿದ್ಯಾವಂತರು ಖಾಸಗಿ ವಲಯದಲ್ಲಿ ಕೆಲಸ ಮಾಡಬೇಕು ಅಥವಾ ಸ್ವಉದ್ಯೋಗ ಮಾಡಬೇಕು’ ಎಂದು ತಿಳಿಸಿದರು.

ಕೆಎಎಸ್‌ ಕಡಿಮೆ: ‘ಈ ಹಿಂದೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಕೋಲಾರ ಆಡಳಿತ ಎಂಬ ಮಾತು ಪ್ರಚಲಿತದಲ್ಲಿತ್ತು. ಜಿಲ್ಲೆಯಿಂದ ಹೆಚ್ಚಿನ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಎಎಸ್‌ ಅಧಿಕಾರಿಗಳಾಗುತ್ತಿದ್ದರು. ಆದರೆ, ಈಗ ಈ ಪ್ರಮಾಣ ಕಡಿಮೆಯಾಗಿದೆ’ ಎಂದು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಬಿ.ವಿ.ಗೋಪಿನಾಥ್ ಬೇಸರ ವ್ಯಕ್ತಪಡಿಸಿದರು.

‘ದೂರದಲ್ಲಿರುವ ಸಿನಿಮಾ ತಾರೆಯರನ್ನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತೇವೆ. ನಮ್ಮ ಮಧ್ಯೆ ಇರುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೋಲಾರದ ನಂದಿನಿ, ಮಾಲೂರಿನ ಬೈರಪ್ಪ ಅವರನ್ನು ಮಕ್ಕಳು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಜೀವನದಲ್ಲಿ ಪ್ರಯತ್ನ ಬಹು ಮುಖ್ಯ’ ಎಂದರು.

ಭಾಷೆ ಸಮಸ್ಯೆ: ‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಭಾಷೆ ಸಮಸ್ಯೆ. ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಸ್ಪಷ್ಟವಾಗಿ ಕಲಿತಿರುವುದಿಲ್ಲ. ಮಾರ್ಗದರ್ಶನ ಸಮಸ್ಯೆಯೂ ಇದೆ’ ಎಂದು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ದಿವಾಕರ, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ರುದ್ರಪ್ಪ, ಸ್ಪರ್ಧಾತ್ಮಕ ಪರೀಕ್ಷೆಗಳ ಸಲಹೆಗಾರ ಎಸ್‌.ಆರ್‌.ರವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.