ADVERTISEMENT

ಜೀವ ವೈವಿಧ್ಯ ಜಾಗೃತಿ ಅಭಿಯಾನ: ಅನಂತ ಹೆಗಡೆ

ಅಪರೂಪದ ಸಸ್ಯ–ವೃಕ್ಷ ಸಮೂಹ ಸಂರಕ್ಷಣೆ ಉದ್ದೇಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 15:08 IST
Last Updated 3 ಜುಲೈ 2021, 15:08 IST

ಕೋಲಾರ: ‘ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಸಮಿತಿ ರಚನೆಯಾಗಿದ್ದು, ಜುಲೈ 1ರಿಂದ ಆ.15ರವರೆಗೆ ಜೀವ ವೈವಿಧ್ಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೀವ ವೈವಿಧ್ಯ ಮಂಡಳಿ ಮೂಲಕ ರಾಜ್ಯದಲ್ಲಿ ಜೀವ ವೈವಿಧ್ಯ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಜೀವ ವೈವಿಧ್ಯತೆ ಗುರುತಿಸಿ ರಕ್ಷಿಸುವ ನಿಟ್ಟಿನಲ್ಲಿ ಪೂರಕವಾಗಿ ಸ್ಥಳೀಯ ಚಟುವಟಿಕೆ ನಡೆಸಲು ಅಭಿಯಾನ ಆರಂಭಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಜೀವ ವೈವಿಧ್ಯ ದಾಖಲಾತಿ ಕಾರ್ಯ ಗ್ರಾ.ಪಂ ಮಟ್ಟದಲ್ಲಿ ಮೊದಲ ಹಂತದಲ್ಲಿ ಮುಗಿದು ನಗರಸಭೆ ಮಟ್ಟದಲ್ಲೂ ದಾಖಲಾತಿ ಮಾಡುವ ಹಂತಕ್ಕೆ ಬಂದಿದೆ. ಕೋಲಾರ ಹೊರ ವಲಯದ ಅಂತರಗಂಗೆ ಬೆಟ್ಟದಲ್ಲಿ 15 ದಿನದಲ್ಲಿ ವಿಶೇಷ ಕಾರ್ಯಕ್ರಮ ನಡೆಸಬೇಕು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಂತರಗಂಗೆ ಬೆಟ್ಟದ ಜತೆಗೆ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗದ ರಾಯಲ್ಪಾಡು ಅರಣ್ಯ ಪ್ರದೇಶದ ಬೆಟ್ಟಗಳಲ್ಲಿರುವ ಅನೇಕ ಸಸ್ಯ ಪ್ರಭೇದಗಳು ನಾಶವಾಗುತ್ತಿವೆ. ಅಪರೂಪದ ಕೋಲಾರ ಸಾಂಬಾರ್ ಗಿಡ ಎಂಬ ಸಸ್ಯವಿದ್ದು, ಇದರ ರಕ್ಷಣೆಗೆ ಕಾರ್ಯಕ್ರಮ ರೂಪಿಸಬೇಕು. ತಾ.ಪಂ ಜೀವ ವೈವಿಧ್ಯ ಸಮಿತಿ ಗುರುತಿಸಿರುವ ಪ್ರದೇಶದ ಸಾಂಪ್ರದಾಯಿಕ ಅಪರೂಪದ ಸಸ್ಯ ಮತ್ತು ವೃಕ್ಷ ಸಮೂಹ ಸಂರಕ್ಷಣೆ ಮಾಡುವುದು ಈ ಅಭಿಯಾನದ ಉದ್ದೇಶ’ ಎಂದು ವಿವರಿಸಿದರು.

‘ರೈತರು ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕಗಳ ಪೈಕಿ 28 ಬಗೆಯ ಕೀಟನಾಶಕಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿವೆ. ಆದರೂ ಆ ಕೀಟನಾಶಕಗಳನ್ನು ಅನಧಿಕೃತವಾಗಿ ಕದ್ದುಮುಚ್ಚಿ ಮಾರುತ್ತಿದ್ದು, ಇದರ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಕೆರೆಗಳು ಕಣ್ಮರೆ: ‘ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳಿದ್ದವು. ಆದರೆ, ಈಗ ಸಾಕಷ್ಟು ಕೆರೆಗಳು ಕಣ್ಮರೆಯಾಗಿವೆ. ಜನರು ಹಾಗೂ ಜಿಲ್ಲಾಡಳಿತವು ಕೆರೆಗಳನ್ನು ಕಾಪಾಡಬೇಕು. ಕೆರೆಗಳು ಆಸುಪಾಸಿನಲ್ಲಿರುವ ಜಲಚರ ಸಸ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಬಫರ್‌ ಝೋನ್‌ ಗುರುತಿಸಿ ಜನರಿಂದ ರಕ್ಷಿಸಬೇಕು’ ಎಂದು ತಿಳಿಸಿದರು.

‘ತಾಲ್ಲೂಕು ಪಂಚಾಯಿತಿ ಜೀವ ವೈವಿಧ್ಯ ಸಮಿತಿಯು ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟವನ್ನು ಗುರುತಿಸಿದೆ. ರಾಜ್ಯ ಮಟ್ಟದಲ್ಲಿ ಜೀವ ವೈವಿಧ್ಯ ಮಂಡಳಿ ಈಗಾಗಲೇ ನಿರ್ಣಯ ಕೈಗೊಂಡಿದ್ದು, ಅಧಿಕೃತವಾಗಿ ಜೈವಿಕ ಪಾರಂಪರಿಕ ತಾಣವಾಗಿ ಘೋಷಿಸುವುದು ಬಾಕಿಯಿದೆ. ಈ ಸಂಬಂಧ ವರದಿ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆ’ ಎಂದರು.

ಸಂರಕ್ಷಿತ ಪ್ರದೇಶ: ‘ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಅತ್ಯಂತ ವಿಶಿಷ್ಟವಾದ ಎಲೆ ಮೂತಿ ಬಾವಲಿಗಳು ಇರುವುದರಿಂದ 150 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ, ಹನುಮನಹಳ್ಳಿ ಭಾಗದಲ್ಲಿ ಅಕ್ರಮ ಗಣಿಗಾರಿಕೆಯಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಿಯಂತ್ರಿಸಲು ಪ್ರಯತ್ನ ಆರಂಭಿಸಿದ್ದಾರೆ. ಬಾವಲಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಅರಣ್ಯ ಪ್ರದೇಶವನ್ನು ವನ್ಯಜೀವಿ ಧಾಮವಾಗಿ ಘೋಷಿಸಿ ಕಾಡಾನೆಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಂತರಗಂಗೆ ಬೆಟ್ಟವನ್ನು 10 ವರ್ಷಗಳ ಹಿಂದೆ ನೋಡಿದ್ದಕ್ಕೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಇಲ್ಲಿ ಕಂದಾಯ ಜಮೀನು, ಸಂರಕ್ಷಿತ ಅರಣ್ಯ, ಖಾಸಗಿ ಜಮೀನು ಇರುವುದರಿಂದ ಒತ್ತುವರಿ ಹಾಗೂ ಪರಿಸರಕ್ಕೆ ಮಾರಕವಾದ ಚಟುವಟಿಕೆ ನಿಯಂತ್ರಿಸಬೇಕು. ಬೆಟ್ಟ ಮತ್ತು ಮತ್ತು ಜಲಧಾರೆ ಕಾಪಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.