ADVERTISEMENT

₹ 14 ಸಾವಿರ ಕೋಟಿ ಸಾಲ ವಿತರಣೆ ಗುರಿ

ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 14:46 IST
Last Updated 9 ಜೂನ್ 2020, 14:46 IST
ಕೋಲಾರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್‌ ವಿತರಿಸಿದರು.
ಕೋಲಾರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್‌ ವಿತರಿಸಿದರು.   

ಕೋಲಾರ: ‘ರಾಜ್ಯದಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಹಕಾರಿ ಬ್ಯಾಂಕ್‌ಗಳ ಮೂಲಕ ₹ 14 ಸಾವಿರ ಕೋಟಿ ಸಾಲ ವಿತರಿಸುವ ಗುರಿಯಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಶ್ರೀರಾಮ ಬಳಕೆದಾರರ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿ ಮಾತನಾಡಿ, ‘ಹಿಂದಿನ ಹಣಕಾಸು ವರ್ಷದಲ್ಲಿ ₹ 13 ಸಾವಿರ ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ಸಾಲದ ಪ್ರಮಾಣವನ್ನು ₹ 1 ಸಾವಿರ ಕೋಟಿ ಹೆಚ್ಚಿಸಲಾಗಿದೆ’ ಎಂದು ವಿವರಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ಕಾಯಕ ಬಂಧು ಯೋಜನೆ ಮಾದರಿಯಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲ ನೀಡುತ್ತೇವೆ. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳು ಲಾಭದಲ್ಲಿದ್ದು, ಬ್ಯಾಂಕ್‌ಗಳು ಸಾಲ ವಿತರಣೆ ಮತ್ತು ವಸೂಲಾತಿ ಪ್ರಗತಿ ಸಂಬಂಧ ಸಮಗ್ರ ತನಿಖೆ ಮಾಡಿಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದವರಲ್ಲೇ ಹೆಚ್ಚಿನ ಮಂದಿಗೆ ಕೊರೊನಾ ಸೋಂಕು ಇದೆ. ರಾಜ್ಯದಲ್ಲಿ ಸೋಂಕು ಸಮುದಾಯಕ್ಕೆ ಹರಿಡಿಲ್ಲ. ಜನರು ಕೊರೊನಾ ಸೋಂಕಿನ ಜತೆಯಲ್ಲಿ ಜೀವನ ಸಾಗಿಸಬೇಕು. ದೇವಾಲಯ, ಚರ್ಚ್, ಮಸೀದಿ, ಮಾಲ್‌ಗಳನ್ನು ತೆರೆಯಲಾಗಿದೆ. ಜನರು ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನ ತಡೆಗೆ ಕೈಜೋಡಿಸಬೇಕು’ ಎಂದು ಕೋರಿದರು.

ದೇವತೆಯರು: ‘ಜೀವದ ಹಂಗು ತೊರೆದು ಕೊರೊನಾ ಸೋಂಕಿನ ತಡೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಕಲಿಯುಗದ ದೇವತೆಗಳಿದ್ದಂತೆ. ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಪ್ರೋತ್ಸಾಹಧನ ನೀಡಿದೆ’ ಎಂದು ಜಿಲ್ಲಾ ಉಸ್ತುವರಿ ಸಚಿವ ಎಚ್.ನಾಗೇಶ್ ಹೇಳಿದರು.

‘ಜಿಲ್ಲೆಯಲ್ಲಿ ಈವರೆಗೆ 30 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 18 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಗುಣಮುಖರಾಗುತ್ತಾರೆ. ಸೋಂಕಿತರ ಸಾವು ಸಂಭವಿಸದ ರೀತಿಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಬೆಲೆ ಕಟ್ಟಲಾಗದು: ‘ಆಶಾ ಕಾರ್ಯಕರ್ತೆಯರು ಕುಟುಂಬ ಸದಸ್ಯರಿಂದ ದೂರವಿದ್ದು, ಪ್ರತಿ ಹಳ್ಳಿಯಲ್ಲೂ ಕೆಲಸ ಮಾಡಿ ಕೊರೊನಾ ಸೋಂಕಿತರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಗೆ ಬೆಲೆ ಕಟ್ಟಲಾಗದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಶಾ ಕಾರ್ಯಕರ್ತೆಯರು ಜೀವಕ್ಕೆ ಅಪಾಯವಿದ್ದರೂ ಕೆಲಸ ಮಾಡಿದ್ದಾರೆ. ಇವರ ಸೇವೆ ಸ್ಮರಿಸುವುದು ಜಿಲ್ಲಾಡಳಿತದ ಕರ್ತವ್ಯ. ಇವರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಹಕಾರ ಸಂಘಗಳ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ್, ಡಿಸಿಸಿ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ, ಜಿಲ್ಲಾ ಲೆಕ್ಕಪರಿಶೋಧಕಿ ಶಾಂತಕುಮಾರಿ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ತಿಪ್ಪಾರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.