ಬೇತಮಂಗಲ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಬೇತಮಂಗಲ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಪವಿಭಾಗ ಕಚೇರಿಯ ಎಇಇ ಸೇರಿದಂತೆ ಮೂವರು ಬುಧವಾರ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಹಾಯ ಕಾರ್ಯಪಾಲಕ ಎಂಜಿನಿಯರ್ (ಎಇಇ) ಶಿವಕುಮಾರ್, ಸಹಾಯಕ ಎಂಜಿನಿಯರ್ (ಎಇ) ರಶ್ಮಿ ಹಾಗೂ ಗುತ್ತಿಗೆ ನೌಕರ ರಾಮಚಂದ್ರಗೌಡ ಸಿಕ್ಕಿಬಿದ್ದಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
ಬೇತಮಂಗಲ ಕಚೇರಿ ಅಲ್ಲದೇ, ಬೆಂಗಳೂರಿನ ನಾಗರಬಾವಿಯಲ್ಲಿರುವ ಶಿವಕುಮಾರ್ ಮನೆಯಲ್ಲೂ ಲೋಕಾಯುಕ್ತ ಪೊಲೀಸರು ಶೋಧಿಸಿದ್ದಾರೆ.
ಶಿವಕುಮಾರ್ ಕಾಮಗಾರಿಗಳನ್ನು ಮಾಡಿಸದೆ ಗುತ್ತಿಗೆದಾರರ ಮೂಲಕ ಹಣವನ್ನು ಪಾವತಿಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಕೆಜಿಎಫ್ ಮೂಲದ ಗುತ್ತಿಗೆದಾರ ಪ್ರವೀಣ್ ಎಂಬುವರು ದೂರು ನೀಡಿದ್ದರು.
ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು. ₹ 2.27 ಲಕ್ಷವನ್ನು ಗುತ್ತಿಗೆದಾರರಿಂದ ಪಡೆಯುತ್ತಿರುವಾಗ ಶಿವಕುಮಾರ್, ರಶ್ಮಿ ಹಾಗೂ ರಾಮಚಂದ್ರಗೌಡ ಟ್ರ್ಯಾಪ್ ಆಗಿದ್ದಾರೆ.
ವಾಟರ್ ವರ್ಕ್ ಪಂಪ್ ಹೌಸ್‌ಗೆ 11 ಕೆ.ವಿ ಲೈನ್ ಪುನರ್ ಸ್ಥಾಪನೆಗೆ ಕೆಲಸ ಮಾಡದೆಯೇ ಬಿಲ್ ಮಾಡುವುದಕ್ಕೆ ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಗೊತ್ತಾಗಿದೆ.
ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆಂತೋಣಿ ಜಾನ್, ಡಿವೈಎಸ್ಪಿ ಸುಧೀರ್, ಇನ್‌ಸ್ಪೆಕ್ಟರ್ ರೇಣುಕಾ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಂಗಳೂರಿನ ನಾಗರಬಾವಿಯಲ್ಲಿನ ಮನೆಯಲ್ಲಿ ಇನ್‌ಸ್ಪೆಕ್ಟರ್ ಆಂಜಿನಪ್ಪ, ಸಿಬ್ಬಂದಿ ದೇವ್, ನಾಗವೇಣಿ ಮತ್ತು ಯೋಶೋಧಾ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.