ADVERTISEMENT

ಮೇ 22ಕ್ಕೆ ಮಡಿವಾಳ ಜನಾಂಗದ ಸಮಾವೇಶ

ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:08 IST
Last Updated 31 ಮಾರ್ಚ್ 2022, 4:08 IST
ಮುಳಬಾಗಿಲು ನಗರದ ಮುತ್ಯಾಲಪೇಟೆಯ ದೋಭಿ ಘಾಟ್‌ನಲ್ಲಿ ನಡೆದ ತಾಲ್ಲೂಕು ಮಡಿವಾಳ ಸಂಘದ ಪೂರ್ವಭಾವಿ ಸಭೆಯನ್ನು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ ಉದ್ಘಾಟಿಸಿದರು
ಮುಳಬಾಗಿಲು ನಗರದ ಮುತ್ಯಾಲಪೇಟೆಯ ದೋಭಿ ಘಾಟ್‌ನಲ್ಲಿ ನಡೆದ ತಾಲ್ಲೂಕು ಮಡಿವಾಳ ಸಂಘದ ಪೂರ್ವಭಾವಿ ಸಭೆಯನ್ನು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ ಉದ್ಘಾಟಿಸಿದರು   

ಮುಳಬಾಗಿಲು: ‘ಮಡಿವಾಳ ಮಾಚಿದೇವರು ಸಮಾಜದಲ್ಲಿ ಅಡಗಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಮೂಲಕ ನವ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಆದರ್ಶಗಳಂತೆ ಸಮಾಜ ಬಾಂಧವರು ಕಾಯಕ ರೂಪದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸೌಲಭ್ಯದಿಂದ ವಂಚಿತರಾಗಿದ್ದು, ಎಚ್ಚೆತ್ತುಕೊಳ್ಳಬೇಕಾಗಿದೆ’ ಎಂದು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ ತಿಳಿಸಿದರು.

ನಗರದ ಮುತ್ಯಾಲಪೇಟೆಯ ದೋಬಿಘಾಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಡಿವಾಳ ಸಂಘದ ಪೂರ್ವಭಾವಿ ಉದ್ಘಾಟಿಸಿ ಅವರು ಮಾತನಾಡಿದರು.

ಮೇ 22ರಂದು ತುಮಕೂರಿನ ಸರ್ಕಾರಿ ಆಟದ ಮೈದಾನದಲ್ಲಿ ಮಡಿವಾಳ ಸಮುದಾಯದ ಬೃಹತ್ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ. ರಾಜ್ಯದ ಎಲ್ಲಾ ಭಾಗಗಳಿಂದ ಸಮಾಜ ಬಾಂಧವರು ಭಾಗವಹಿಸಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದು ಹೇಳಿದರು.

ADVERTISEMENT

ಮುಖಂಡ ಕೆ.ವಿ. ಅಮರ್‌ನಾಥ್ ಮಾತನಾಡಿ, ಸಮುದಾಯದ ಒಗ್ಗಟ್ಟಿನಿಂದ ಬೆಂಗಳೂರು, ಕೂಡಲಸಂಗಮ, ಮೈಸೂರು, ಮಂಡ್ಯ, ಚಿತ್ರದುರ್ಗದಲ್ಲಿ ನಡೆದ ಬೃಹತ್ ಜಾಗೃತಿ ಸಮಾವೇಶಗಳ ಫಲವಾಗಿ ಮಡಿವಾಳ ಮಾಚಿದೇವರ ಜನ್ಮಸ್ಥಳವಾದ ದೇವರ ಹಿಪ್ಪರಿಗೆ ಅಭಿವೃದ್ಧಿ ಸರ್ಕಾರ ₹ 3 ಕೋಟಿ ಅನುದಾನ ನೀಡಿದೆ ಎಂದರು.

ಮಾಚಿದೇವರ ಜಯಂತಿಯನ್ನು ಫೆ. 1ರಂದು ಸರ್ಕಾರದಿಂದ ಆಚರಿಸಲಾಗುತ್ತಿದೆ. ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 25 ಕೋಟಿ ಅನುದಾನ ನೀಡಿದೆ. ಚಿತ್ರದುರ್ಗದಲ್ಲಿ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಲಾಗಿದೆ. ಸಮಾಜದ ಎಂಟು ಮುಖಂಡರಿಗೆ ಉನ್ನತ ಹುದ್ದೆಗಳನ್ನು ನೀಡಲಾಗಿದೆ. ಇದೆಲ್ಲ ಹೋರಾಟದ ಫಲವಾಗಿದೆ ಎಂದು ತಿಳಿಸಿದರು.

ಮುಳಬಾಗಿಲು ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಎನ್. ರಾಜಗೋಪಾಲ್ ಮಾತನಾಡಿ, ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆ. ತಲೆತಲಾಂತರಗಳಿಂದ ಗ್ರಾಮದ ಬಡಾವಣೆಗಳಲ್ಲಿ ವಾಸಿಸುವ ಜನರ ಬಟ್ಟೆಗಳನ್ನು ಸ್ವಚ್ಛಗೊಳಿಸಿ ನೀಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಶೋಷಿತರಲ್ಲಿ ಅತಿ ಶೋಷಿತರಾಗಿ ದ್ದೇವೆ. ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು 80ರ ದಶಕದಿಂದಲೂ ಮನವಿ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಒಗ್ಗಟ್ಟು ಕಡಿಮೆ ಇರುವ ಕಾರಣ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಎಲ್ಲರೂ ಜಾಗೃತರಾಗಿ ತುಮಕೂರಿನ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.

ತರೀಕೆರೆ ವಿಧಾನಸಭಾ ಕ್ಷೇತ್ರದ ಮುಖಂಡ ಎಚ್.ಎಂ. ಗೋಪಿಕೃಷ್ಣ, ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಆರ್. ಯಲ್ಲಪ್ಪ, ಖಜಾಂಚಿ ಆರ್. ಮಂಜುನಾಥ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಜಾತಾ ಮಯೂರಿ, ತುಮಕೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್, ಕೋಲಾರ ಜಿಲ್ಲಾ ಅಧ್ಯಕ್ಷ ಕೆ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಕೆ. ರಂಗನಾಥ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಸಂತೋಷ್, ತಾಲ್ಲೂಕು ಗೌರವಾಧ್ಯಕ್ಷ ಎಂ. ಮುನಿನಾರಾಯಣಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.