ADVERTISEMENT

ಮಹಾಶಿವರಾತ್ರಿ: ಕೋಟಿಲಿಂಗೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:15 IST
Last Updated 8 ಮಾರ್ಚ್ 2024, 15:15 IST
ಕೆಜಿಎಫ್‌ ಸಮೀಪದ ಕಮ್ಮಸಂದ್ರ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ಬೃಹತ್ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕೆಜಿಎಫ್‌ ಸಮೀಪದ ಕಮ್ಮಸಂದ್ರ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ಬೃಹತ್ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಕೆಜಿಎಫ್‌: ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ನಗರದ ಹೊರವಲಯದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತು.

ಮುಂಜಾನೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದ ಭಕ್ತರು ದೇವಾಲಯದ ಸಂಕೀರ್ಣದಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹಬ್ಬದ ಅಂಗವಾಗಿ ಇಡೀ ದೇವಾಲಯ ಸಮುಚ್ಛಯವನ್ನು ಹೂಗಳಿಂದ ಸಿಂಗರಿಸಲಾಗಿತ್ತು. 108 ಅಡಿಗಳ ಬೃಹತ್ ಲಿಂಗ ಮತ್ತು ಅದರ ಮುಂದಿನ ನಂದಿ ವಿಗ್ರಹ ಪ್ರಮುಖ ಆಕರ್ಷಣೀಯವಾಗಿತ್ತು ಸಿಂಗಾರಗೊಂಡಿತ್ತು. ಟನ್‌ ಗಟ್ಟಲೆ ಹೂವಿನಿಂದ ಬೃಹತ್ ಲಿಂಗವನ್ನು ಅಲಂಕಾರ ಮಾಡಲಾಗಿತ್ತು. ಅಲಂಕಾರಕ್ಕೆ ತಮಿಳುನಾಡಿನಿಂದ ಹೂಗಳನ್ನು ತರಿಸಲಾಗಿತ್ತು. ಬೃಹತ್ ಲಿಂಗ ಮತ್ತು ನಂದಿಯನ್ನು ಹೋಲುವ ಸಣ್ಣ ಪ್ರಮಾಣದ ಲಿಂಗ ಕೂಡ ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು.

ADVERTISEMENT

ಕೋಟಿಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಾಲಯದ ಸಂಕೀರ್ಣದಲ್ಲಿರುವ ವೆಂಕಟರಮಣಸ್ವಾಮಿ ಸ್ವಾಮಿ, ಅಯ್ಯಪ್ಪ, ಕನ್ನಿಕಾ ಪರಮೇಶ್ವರಿ, ಬ್ರಹ್ಮ ,ವಿಷ್ಣು, ಮಹೇಶ್ವರ, ಅಯ್ಯಪ್ಪಸ್ವಾಮಿ, ಅನ್ನಪೂರ್ಣೇಶ್ವರಿ, ಪಾಂಡುರಂಗಸ್ವಾಮಿ, ಸಂತೋಷಿ ಮಾತ, ಪಂಚಮುಖಿ ಆಂಜನೇಯ ಸ್ವಾಮಿ, ದತ್ತಾತ್ರೇಯ, ಮಾರಿಯಮ್ಮ, ಶಿರಡಿ ಸಾಯಿಬಾಬ ಸೇರಿದಂತೆ ಹಲವು ದೇವಾಲಯಗಳಿಗೆ ಭಕ್ತರು ಭೇಟಿ ನೀಡಿದ್ದರು.

ಜಾಗರಣೆ ಅಂಗವಾಗಿ ಶಿವಕಥೆ ಮತ್ತು ಕೀರ್ತನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಉಸ್ತುವಾರಿ ವಹಿಸಿದ್ದರು. ಶಾಸಕಿ ಎಂ.ರೂಪಕಲಾ ಸೇರಿದಂತೆ ಹಲವಾರು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.