ADVERTISEMENT

ಹೈನೋದ್ಯಮ ಜಿಲ್ಲೆಯ ರೈತರ ಜೀವನಾಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:33 IST
Last Updated 4 ಜೂನ್ 2020, 17:33 IST
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಯೋನಿವೃತ್ತಿ ಪರಿಹಾರ ಧನದ ಚೆಕ್‌ ವಿತರಿಸಿದರು.
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಯೋನಿವೃತ್ತಿ ಪರಿಹಾರ ಧನದ ಚೆಕ್‌ ವಿತರಿಸಿದರು.   

ಕೋಲಾರ: ‘ಹೈನೋದ್ಯಮವು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರ ಸಂಘಗಳ ಸಿಬ್ಬಂದಿ ಒತ್ತು ನೀಡಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಯೋನಿವೃತ್ತಿ ಪರಿಹಾರ ಧನ, ನೂತನ ಕಟ್ಟಡದ ಅನುದಾನ ಮತ್ತು ವಿವಿಧ ಯೋಜನೆಗಳ ಸಹಾಯಧನ ಚೆಕ್‌ ವಿತರಿಸಿ ಮಾತನಾಡಿ, ‘ಬೇಸಿಗೆ ಹಿನ್ನೆಲೆಯಲ್ಲಿ ಹಾಲಿನ ಗುಣಮಟ್ಟ ಕಡಿಮೆಯಾಗುತ್ತದೆ. ಈ ಬಗ್ಗೆ ರೈತರು ಗಮನ ಹರಿಸಬೇಕು’ ಎಂದರು.

‘ತಾಲ್ಲೂಕಿನಲ್ಲಿ ಹಾಲಿನ ಗುಣಮಟ್ಟ ಉತ್ತಮಪಡಿಸಿ ಉತ್ಪಾದಕರಿಗೆ ಎಸ್‌ಎನ್ಎಫ್‌ ಆಧಾರದಲ್ಲಿ ಪ್ರೋತ್ಸಾಹಧನ ಸಿಗುವಂತೆ ಮಾಡಬೇಕು. ತಾಲ್ಲೂಕಿನಲ್ಲಿ ಹಂತ ಹಂತವಾಗಿ ಎಲ್ಲಾ ಬಿಎಂಸಿ ಕೇಂದ್ರಗಳ ಮೂಲಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸಂಘಗಳ ಸಿಬ್ಬಂದಿಗೆ ಒಕ್ಕೂಟದಿಂದ ಪ್ರಪ್ರಥಮ ಬಾರಿಗೆ ವಯೋನಿವೃತ್ತಿ ಪರಿಹಾರಧನ ನೀಡಲಾಗುತ್ತಿದೆ. ವಯೋನಿವೃತ್ತಿ ಹೊಂದಿದ ಸಿಬ್ಬಂದಿಯು ಸಂಘಗಳಿಗೆ ಮಾರ್ಗದರ್ಶಕರಾಗಿ ಉತ್ಪಾದಕರ ಹಿತದೃಷ್ಟಿಯಿಂದ ಸಹಕಾರ ನೀಡಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

‘ಹಾಲು ಶೇಖರಣೆ, ಹಾಲಿನ ಗುಣಮಟ್ಟ ಉತ್ತಮಪಡಿಸಲು ರಾಸುಗಳಿಗೆ ರಸಮೇವು ನೀಡಬೇಕು. ಸಕಾಲದಲ್ಲಿ ಸಂಘಗಳ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

ವಿಸ್ತಾರಣಾಧಿಕಾರಿ ಶ್ರೀನಿವಾಸ್‌, ತಾಲ್ಲೂಕಿನ ವಿವಿಧ ಪ್ರಾಥಮಿಕ ಹಾಲು ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.