ADVERTISEMENT

ನೈತಿಕ ಮೌಲ್ಯ ರೂಢಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 10:24 IST
Last Updated 6 ಫೆಬ್ರುವರಿ 2019, 10:24 IST

ಕೋಲಾರ: ‘ಮಕ್ಕಳು ಜೀವನದಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ನೈತಿಕ ಮೌಲ್ಯ ರೂಢಿಸಿಕೊಳ್ಳಬೇಕು’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸಲಹೆ ನೀಡಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಣ ಮಹತ್ವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಂತ್ರಜ್ಞಾನವನ್ನು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಬಳಸಬೇಕೇ ಹೊರತು ದುರುಪಯೋಗಪಡಿಸಿಕೊಳ್ಳಬಾರದು’ ಎಂದರು.

‘ಯುವ ಶಕ್ತಿ ಮೇಲೆ ನಂಬಿಕೆ ಇಟ್ಟಿದ್ದ ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್, ಸುಭಾಷ್ ಚಂದ್ರಬೋಸ್ ಅವರಂತಹ ಮಹನೀಯರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಬದುಕಿನಲ್ಲಿ ಅಂಕ ಗಳಿಕೆಗಿಂತ ಸಂಸ್ಕಾರಯುತ ಮೌಲ್ಯ ಶಿಕ್ಷಣದ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳು ನುಡಿದಂತೆ ನಡೆಯುವ ಗುಣ ಬೆಳೆಸಿಕೊಳ್ಳಬೇಕು. ಮಾತು ಕಡಿಮೆ ಮಾಡಿ ಮಾಡುವ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಸಾಧನೆ ಮಾಡಬಹುದು’ ಎಂದು ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕಲಿಕೆ, ಸ್ವಚ್ಛತೆ, ಸಾಂಸ್ಕೃತಿಕ ಕಾರ್ಯಕ್ರಮ, ಹಾಜರಾತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಕೃಷ್ಣಪ್ಪ, ಎಂ.ಆರ್.ಮೀನಾ, ಎಚ್.ಮುನಿಯಪ್ಪ, ಆರ್.ಮಂಜುಳಾ, ಕೆ.ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.