ADVERTISEMENT

ಕೋಲಾರ | ಮಾಲೂರು ರಾಜಕಾರಣದಲ್ಲಿ ತಿರುವು; ಮುಂದೇನು?

ಕೆ.ಓಂಕಾರ ಮೂರ್ತಿ
Published 17 ಸೆಪ್ಟೆಂಬರ್ 2025, 5:38 IST
Last Updated 17 ಸೆಪ್ಟೆಂಬರ್ 2025, 5:38 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಕೋಲಾರ: ಸತತ ಎರಡನೇ ಬಾರಿ ಶಾಸಕರಾಗಿ, ಈಚೆಗೆ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡರಿಗೆ ಒಮ್ಮೆಲೇ ದೊಡ್ಡ ಆಘಾತ ಹಾಗೂ ಸಂಕಷ್ಟ ಎದುರಾಗಿದೆ.

ಅವರು ಇನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ತಮ್ಮ ಆಯ್ಕೆ ರದ್ದುಗೊಳಿಸಿರುವ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತರಬೇಕಿದೆ. ಇಲ್ಲವಾದಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಜೊತೆಗೆ ಮರು ಮತ ಎಣಿಕೆಯ ಸವಾಲನ್ನೂ ಎದುರಿಸಬೇಕಿದೆ. ಆಯ್ಕೆ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದ್ದು, ನ್ಯಾಯಾಲಯ ನೀಡಲಿರುವ ಮುಂದಿನ ತೀರ್ಪಿನ ಮೇಲೆ ಅವರ ರಾಜಕೀಯ ಅಸ್ತಿತ್ವ ಅವಲಂಬಿಸಿದೆ.

ಕೆಎಂಎಫ್‌ ಅಧ್ಯಕ್ಷ ಅಥವಾ ಸಚಿವ ಸ್ಥಾನದ ಕನಸು ಕಾಣುತ್ತಿರುವ ನಂಜೇಗೌಡರಿಗೆ ಇದರಿಂದ ಸದ್ಯಕ್ಕೆ ತುಸು ಹಿನ್ನಡೆಯಾಗಿ ಪರಿಣಮಿಸಿದೆ. ಜೊತೆಗೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಬಿರುಗಾಳಿಯಂತೆ ಬಂದಪ್ಪಳಿಸಿದೆ.

ADVERTISEMENT

2023ರ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಅಖಾಡವಾಗಿದ್ದ ಮಾಲೂರು ಕ್ಷೇತ್ರದ ರಾಜಕಾರಣಕ್ಕೆ ತಿರುವು ಸಿಕ್ಕಿದ್ದು, ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಮರು ಮತ ಎಣಿಕೆ ನಡೆದರೂ ಗೆಲುವು ತಮ್ಮದೇ ಎಂಬುದಾಗಿ ಬಹಳ ಹಿಂದಿನಿಂದ ಹೇಳುತ್ತಿದ್ದರೂ ರಾಜಕೀಯವಾಗಿ ಈಗ ಅವರು ಸದ್ಯ ಹಿನ್ನಡೆ ಅನುಭವಿಸಿದ್ದಾರೆ. ಇತ್ತ ಕ್ಷೇತ್ರದ ಪ್ರತಿಸ್ಪರ್ಧಿಗಳಾದ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದ ಹೂಡಿ ವಿಜಯಕುಮಾರ್‌ ಅವರ ಮೊಗದಲ್ಲಿ ಮಂದಹಾಸ ಮೂಡಿದೆ.

ಈಗಾಗಲೇ ನಂಜೇಗೌಡರು ಜಿಲ್ಲಾ ಕಾಂಗ್ರೆಸ್‌ನಲ್ಲೇ ಬಂಗಾರಪೇಟೆಯ ಸ್ವಕ್ಷೀಯ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಬಣದವರು ಸೇರಿದಂತೆ ಹಲವರಿಂದ ಕೋಮುಲ್‌ ಹಾಗೂ ರಾಜಕೀಯ ವಿಚಾರಗಳಲ್ಲಿ ಪ್ರತಿರೋಧ ಎದುರಿಸುತ್ತಿದ್ದಾರೆ.

ಮಾಲೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಂಜೇಗೌಡ, ಮಂಜುನಾಥಗೌಡ ಹಾಗೂ ಹೂಡಿ ವಿಜಯಕುಮಾರ್‌ ನಡುವೆ ಮತ ಎಣಿಕೆಯ ಆರಂಭದಿಂದಲೂ ಭಾರಿ ಪೈಪೋಟಿ ಏರ್ಪಟ್ಟಿತ್ತು. ಇದು ಸುಮಾರು 15 ಸಾವಿರ ಸುತ್ತುಗಳವರೆಗೆ ಸಾಗಿತ್ತು. ಒಂದೊಂದು ಸುತ್ತಿನಲ್ಲಿ ಒಬ್ಬೊಬ್ಬರು ಮುನ್ನಡೆ ಸಾಧಿಸುತ್ತಿದ್ದರು. ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದ್ದ ಹೂಡಿ ವಿಜಯಕುಮಾರ್‌ ತಮ್ಮದೇ ಗೆಲುವು ಎಂದು ಸಂಭ್ರಮಿಸಿದ್ದರು. ಕೊನೆಯಲ್ಲಿ ನಂಜೇಗೌಡ ಗೆಲುವಿನ ನಗು ಬೀರಿದ್ದರು. ಬಿಜೆಪಿ ಟಿಕೆಟ್‌ ಸಿಗದ ಕಾರಣ ಹೂಡಿ ವಿಜಯಕುಮಾರ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದು ಬಿಜೆಪಿಗೆ ಮುಳುವಾಗಿತ್ತು.

2018ರಲ್ಲಿ ನಂಜೇಗೌಡ ಮೊದಲ ಬಾರಿ ಗೆದ್ದಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಮಂಜುನಾಥಗೌಡ 2022ರಲ್ಲಿ ಬಿಜೆಪಿ ಸೇರಿದ್ದರು.

ಇನ್ನು ನಾಲ್ಕು ವಾರಗಳಲ್ಲಿ ಜಿಲ್ಲಾಡಳಿತವು ಮಾಲೂರು ಕ್ಷೇತ್ರದ ಮರು ಮತ ಎಣಿಕೆ ನಡೆಸಬೇಕಿದೆ. ಅಕಸ್ಮಾತ್‌ ಏನಾದರೂ ವ್ಯತ್ಯಾಸ ಬಂದರೆ ಆಗ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿನ ರಾಜಕಾರಣಕ್ಕೆ ಹೊಸ ತಿರುವು ಸಿಗಲಿದೆ, ರಾಜಕೀಯದ ಸನ್ನಿವೇಶ ಬದಲಾಗಲಿದೆ. ಮರು ಮತ ಎಣಿಕೆಯಲ್ಲಿ ಅಕಸ್ಮಾತ್ ವ್ಯತ್ಯಾಸ ಬಂದರೂ ಕೋಮುಲ್‌ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ.ಆದರೆ, ಶಾಸಕ ಸ್ಥಾನಕ್ಕೆ ಕುತ್ತು ಬರುತ್ತದೆ.

ಹೀಗಾಗಿ, ನಂಜೇಗೌಡರ ಎದುರು ಸದ್ಯಕ್ಕೆ ದೊಡ್ಡ ಸವಾಲು ಇದ್ದು, ಅದರಿಂದ ಯಾವ ರೀತಿ ಪಾರಾಗಿ ಬರುತ್ತಾರೆ ಎಂಬ ಕುತೂಹಲ ಮಾಲೂರು ಕ್ಷೇತ್ರದಲ್ಲಿ ನೆಲೆಸಿದೆ. ಈಗಾಗಲೇ ರಾಜಕೀಯವಾಗಿ ವಿವಿಧ ಕಸರತ್ತು ಆರಂಭವಾಗಿದೆ. ಎಲ್ಲವೂ ನ್ಯಾಯಾಲಯದ ತೀರ್ಪು ಹಾಗೂ ಮರು ಮತ ಎಣಕೆ ಮೇಲೆ ಅವಲಂಬಿಸಿದೆ.

ಮತ ಎಣಿಕೆ ವೇಳೆ ನಡೆದಿದ್ದೇನು?

ಕೋಲಾರ ನಗರದ ಬಾಲಕರ ಕಾಲೇಜಿನಲ್ಲಿ 2023ರ ಮೇ 13ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಅವರು 50955 ಮತ ಪಡೆದರೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ ಗೌಡ 50707 ಮತ ಗಳಿಸಿದ್ದರು. ಕೆಲವೇ ಮತಗಳ ಅಂತರದಿಂದ ಸೋಲಾಗಿದೆ ಎಂಬುದು ಗೊತ್ತಾಗುತ್ತಿದಂತೆ ಮತ ಎಣಿಕೆ ಕೇಂದ್ರದಲ್ಲಿ ಧಾವಿಸಿ ಬಂದ ಮಂಜುನಾಥಗೌಡ ಹಾಗೂ ಬೆಂಬಲಿಗರು ಮರು ಎಣಿಕೆಗೆ ಪಟ್ಟು ಹಿಡಿದರು. ಇದಕ್ಕೆ ನಂಜೇಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಆಗ ವಾಗ್ವಾದ ತಳ್ಳಾಟ ನಡೆಯಿತು. ಅಂದು ಸಂಸದರಾಗಿದ್ದ ಎಸ್‌.ಮುನಿಸ್ವಾಮಿ ಕೂಡ ಬಂದು ಮರು ಎಣಿಕೆ ಮಾಡುವಂತೆ ಮನವಿ ಮಾಡಿದ್ದರು. ಅಂದಿನ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಉಭಯ ಪಕ್ಷದವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಕೇಂದ್ರ ವಲಯ ಐಜಿಪಿ ಆಗಿದ್ದ ಬಿ.ಆರ್‌.ರವಿಕಾಂತೇಗೌಡ ಬಂದು ವಾತಾವರಣವನ್ನು ತಿಳಿಗೊಳಿಸಿದ್ದರು. ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾ ನಿಯಮದ ಪ್ರಕಾರ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಲಾಯಿತು. ಆಗಲೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಹೀಗಾಗಿ ಚುನಾವಣಾಧಿಕಾರಿಯೂ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದರು. ‘ಮರು ಮತ ಎಣಿಕೆಗೆ ಆಗ್ರಹಿಸಿ ನ್ಯಾಯಾಲಯ ಮೊರೆ ಹೋಗುತ್ತೇನೆ’ ಎಂದು ಮಂಜುನಾಥಗೌಡ ಸುದ್ದಿಗಾರರಿಗೆ ತಿಳಿಸಿದ್ದರು.

ಮತ ಎಣಿಕೆ ಪ್ರಶ್ನಿಸಿದ್ದ ಮಂಜುನಾಥಗೌಡ

2023ರ ವಿಧಾನಸಭೆ ಚುನಾವಣೆಯಲ್ಲಿ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಂಜೇಗೌಡ ಅವರ ಆಯ್ಕೆ ಪ್ರಶ್ನಿಸಿ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್‌.ಮಂಜುನಾಥಗೌಡ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಮತ ಎಣಿಕೆಯಲ್ಲಿ ಲೋಪವುಂಟಾಗಿದ್ದು ನಂಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು ಮರು ಮತ ಎಣಿಕೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಗತ್ಯ ದಾಖಲಾತಿ ನೀಡುವಂತೆ ಕೇಳಿತ್ತು. ಅದರಂತೆ ಭದ್ರತಾ ಕೊಠಡಿನಲ್ಲಿದ್ದ (ಸ್ಟ್ರಾಂಗ್‌ ರೂಮ್‌) ದಾಖಲೆಗಳನ್ನು ನ್ಯಾಯಾಲಯಕ್ಕೆ ಜಿಲ್ಲಾಧಿಕಾರಿ ನೀಡಿದ್ದರು.

ಇವಿಎಂ ಉಗ್ರಾಣ ಪರಿಶೀಲಿಸಿದ್ದ ಡಿ.ಸಿ

ಜಿಲ್ಲಾ ಚುನಾವಣಾಧಿಕಾರಿಯೂ ಹಿಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷಾ ನ್ಯಾಯಾಲಯದ ಸೂಚನೆಯಂತೆ 2024ರ ಆಗಸ್ಟ್‌ 13ರಂದು ಪೊಲೀಸರ ಬಿಗಿ ಭದ್ರತೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆದು ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆಗಳನ್ನು ತಡಕಾಡಿದ್ದರು. ಆದರೆ ವಿಡಿಯೊ ಸೇರಿದಂತೆ ಕೆಲ ನಿರ್ದಿಷ್ಟ ದಾಖಲೆಗಳು ಉಗ್ರಾಣದಲ್ಲಿ ಲಭ್ಯವಾಗಿರಲಿಲ್ಲ. ಮಾಲೂರಿನ ಖಜಾನೆಯಲ್ಲಿ ಇರಬಹುದೇ ಎಂಬುದನ್ನು ಪರಿಶೀಲಿಸಲಾಗಿತ್ತು. ಮತ ಎಣಿಕೆ ಸಂದರ್ಭದ ಸಿ.ಸಿ.ಟಿ.ವಿ ದೃಶ್ಯಾವಳಿ ಹಾರ್ಡ್‌ ಡಿಸ್ಕ್‌ ಕೇಳಿತ್ತು.

‘ವಿಡಿಯೊ ನಾಶ ಮಾಡಿದ್ದಾರೆ’

‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಸುತ್ತಾರೆ. ಆದರೆ ಆಗಿನ ಚುನಾವಣಾಧಿಕಾರಿ ಆಗಿದ್ದವರು ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿಡಿಯೊವನ್ನೇ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದರಲ್ಲಿ ಏನೋ ಸಂಚು ನಡೆದಿದೆ. ವಿಡಿಯೊ ನಾಶ ಮಾಡಿದ್ದಾರೆ’ ಎಂದು ಮಂಜುನಾಥಗೌಡ ಆರೋಪಿಸಿದರು. ‘ವಿಡಿಯೊ ಮಾಡಿದ್ದ ಕಂಪನಿಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದರು

ಮರು ಮತ ಎಣಿಕೆಗೆ ಸಿದ್ಧತೆ

ಕೋಲಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ (ಚುನಾವಣಾ ಸಮಯದ) ವಿರುದ್ಧ ಕ್ರಮಕ್ಕೆ ಸೂಚಿಸಿರುವ ನ್ಯಾಯಾಲಯ ನಾಲ್ಕು ವಾರದಲ್ಲಿ ಮರು ಮತ ಎಣಿಕೆ ನಡೆಸಲು ಆದೇಶಿಸಿದೆ. ಹೀಗಾಗಿ ಹಾಲಿ ಜಿಲ್ಲಾಡಳಿತ ಮರು ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ನ್ಯಾಯಾಲಯ ಆದೇಶ ಪ್ರತಿ ಲಭ್ಯವಾಗುತ್ತಿದ್ದಂತೆ ಈ ಸಂಬಂಧ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿ ವೆಂಕಟರಾಜ ಇದ್ದರು. ಈಗ ಅವರು ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಜಿಲ್ಲಾ ಚುನಾವಣಾಧಿಕಾರಿಯಾಗಿ ಎಂ.ಆರ್‌.ರವಿ ಇದ್ದಾರೆ.

ಸಿ.ಎಂ ಕಾರ್ಯಕ್ರಮ ಡೋಲಾಯಮಾನ!

ಅ.30ಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲೂರಿಗೆ ಬರುವುದು ಈಗಾಗಲೇ ನಿಗದಿಯಾಗಿದೆ. ಅಷ್ಟರಲ್ಲಿ ನಂಜೇಗೌಡ ಅವರಿಗೆ ಈ ಆಘಾತ ಎದುರಾಗಿದೆ. ಇದರಿಂದ ಮುಖ್ಯಮಂತ್ರಿ ಭೇಟಿ ಡೋಲಾಯಮಾನವಾಗಿದೆ. ‘ನಾನೇನೂ ಮಾಜಿ ಶಾಸಕ ಆಗಿಲ್ಲ. ಕಾರ್ಯಕ್ರಮ ಅದರ ಪಾಡಿಗೆ ಅದು ನಡೆಯುತ್ತದೆ. ಅಷ್ಟರಲ್ಲಿ ನಾನು ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ತರುತ್ತೇನೆ’ ಎಂದು ನಂಜೇಗೌಡ ಹೇಳಿದರು.

ಶಾಸಕರಿಲ್ಲದೆ ಮಾಲೂರು ಕ್ಷೇತ್ರ ತಬ್ಬಲಿ ಆಗಿದೆ ಎಂಬುದಾಗಿ ಪರಾಜಿತ ಅಭ್ಯರ್ಥಿ ಹೇಳಿಕೊಂಡಿದ್ದಾರೆ. ಆದರೆ ಅವರ ಆಸೆ ಫಲಿಸಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಜಯ ಸಿಗಲಿದೆ.
ಕೆ.ವೈ.ನಂಜೇಗೌಡ ಶಾಸಕ
ವಿಳಂಬವಾದರೂ ನ್ಯಾಯದಾನ ಸಿಕ್ಕಿದೆ. ಮಾಲೂರಿಗೆ ಇನ್ನು ಶಾಸಕರು ಇಲ್ಲ. ನಂಜೇಗೌಡರು ಸುಪ್ರಿಂ ಕೋರ್ಟ್‌ಗೆ ಹೋಗಿ ಮೇಲ್ಮನವಿ ಸಲ್ಲಿಸಿದರೆ ಅಲ್ಲೂ ನಾನು ಹೋರಾಟ ಮುಂದುವರಿಸುತ್ತೇನೆ.
ಕೆ.ಎಸ್‌.ಮಂಜುನಾಥಗೌಡ ಮಾಜಿ ಶಾಸಕ ಮಾಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.