ಮಾಲೂರು: ತಾಲ್ಲೂಕಿನ ತೊರ್‍ನಹಳ್ಳಿ ಸಪ್ಲಾಂಬ ದೇವಿ ಮತ್ತು ಭಿಮಲೀಂಗೇಶ್ವರಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ಎಂದರೆ ಅದು ರಾಸುಗಳ ವ್ಯಾಪಾರಕ್ಕೇ ಜನಜನಿತ. ಈ ಸಲವೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ದನಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಜನರ ದಂಡೇ ಹರಿದು ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ವ್ಯಾಪರದಲ್ಲಿ ತೊಡಗಿರುವುದು ಈ ಭಾರಿಯ ವಿಶೇಷ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ತೊರ್‍ನಹಳ್ಳಿಯ ಸಪ್ಲಾಂಬ ದೇವಿ ಮತ್ತು ಭಿಮಲೀಂಗೇಶ್ವರಸ್ವಾಮಿ ರಾಸುಗಳ ಜಾತ್ರೆಯನ್ನು ಕಳೆದ ಕೆಲವು ವರ್ಷಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡಿದ್ದರಿಂದ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಮತ್ತೆ ರಾಸುಗಳ ಜಾತ್ರೆಗೆ ಉತ್ಸಾಹ ಹೆಚ್ಚಿದ್ದು, ರಾಸುಗಳನ್ನು ಕೊಳ್ಳುವ ಮತ್ತು ಮಾರುವ ಭರಾಟೆ ಭರದಿಂದ ಸಾಗಿತ್ತು.
ಒಂದು ವರ್ಷದ ಸಣ್ಣ ಕರುಗಳಿಗೆ ₹ 70ರಿಂದ 80 ಸಾವಿರ ನಿಗದಿಯಾಗಿದೆ. ಈ ಭಾಗದ ಹಳ್ಳಿಕಾರ್ ತಳಿ ಹೋರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಅಮೃತ್ ಮಹಲ್ ತಳಿ ಕೂಡ ಕಾಣಿಸಿಕೊಂಡವು. ಉತ್ತಮ ತಳಿಯ ರಾಸುಗಳು ಜಾತ್ರೆಯಲ್ಲಿ ಮಾರಾಟಕ್ಕೆ ಬಂದಿದ್ದು, ಜಾತ್ರೆ ಇನ್ನಷ್ಟು ಕಳೆಗಟಿದೆ.
₹ 25 ಸಾವಿರದಿಂದ 16 ಲಕ್ಷ ಬೆಲೆಯ ರಾಸುಗಳು ಜಾತ್ರೆಯಲ್ಲಿ ಕಂಡುಬಂದವು. ಹಳ್ಳಿಕಾರ್ ಜಾತಿಯ ಎತ್ತುಗಳು ಗಟ್ಟಿಮುಟ್ಟಾದ ನಡೆ, ಬಲವಾದ ನಿಲುವಿನ ಕಾಲು, ನೀಳವಾದ ಕುತ್ತಿಗೆ, ಕಣ್ಣುಬಿನ ಮೇಲೆ ಆಕರ್ಷಣಿಯ ರೇಖೆ ಹೊಂದಿದ್ದು, ಜಡೆಯಂತೆ ಉದ್ದವಾದ ಬಾಲ, ಸ್ವಲ್ಪ ಮುಂಭಾಗಿದ ಸಣ್ಣದಾದ ಕೋಡು ನೋಡಲು ಆಕರ್ಷಣೀಯವಾಗಿವೆ. ಅವುಗಳ ಉತ್ಪಾದಕತೆಯೂ ಹೆಚ್ಚು. ರೋಗಗಳು ಬಂದರೂ ಈ ತಳಿಯ ದನಗಳು ತಡೆಯುತ್ತವೆ. ಹಾಗಾಗಿ ಈ ತಳಿ ರಾಸುಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಈ ಭಾಗದ ರೈತರು.
ಜಾತ್ರೆಯಲ್ಲಿ ಕೋಲಾರ, ದೊಡ್ಡ ಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಮುಳುಬಾಗಿಲು, ಬಂಗಾರಪೇಟೆ, ಬಳ್ಳಾರಿ, ದಾರವಾಡ, ಕಲಬುರಗಿ ಸೇರಿದಂತೆ ನೆರೆಯ ಆಂದ್ರ ಪ್ರದೇಶ, ತಮಿಳು ನಾಡಿನಿಂದಲೂ ರಾಸುಗಳು ಬಂದಿವೆ.
‘ಜಾತ್ರೆಯಲ್ಲಿ ಹೋರಿಗಳನ್ನು ಖರೀದಿಸಿ ಅವುಗಳನ್ನು ವ್ಯವಸಾಯಕ್ಕೆ ಬಳಸುವುದು ಲಾಭದಾಯಕವಾಗಿ ಕಂಡಿದೆ. ವರ್ಷದಲ್ಲಿ ಕನಿಷ್ಠ 4 ಜೋತೆ ಹಳ್ಳಿಕಾರ್ ಹೋರಿಗಳನ್ನು ಸಾಕಿ ಮಾರಾಟ ಮಾಡುತ್ತೇನೆ. ಇದರಿಂದ ಕನಿಷ್ಠ ₹ 2ರಿಂದ 4 ಲಕ್ಷ ಅದಾಯ ಸಿಗುತ್ತದೆ’ ಎನ್ನತ್ತಾರೆ ದೊಡ್ಡಬಳ್ಳಾಪುರದ ರೈತ ಚನ್ನವೀರಪ್ಪ.
ಜಾತ್ರೆಯಲ್ಲಿ ರಾಸುಗಳು ಕಡಿಮೆ ಇವೆ. ಆಗಾಗಿ ದರ ಹೆಚ್ಚಿದೆ. ಒಳ್ಳೆ ಜಾತಿ ದನಗಳು ಇವೆ. ಈ ವರ್ಷ ಮಳೆ ಬೆಳೆ ಆಗಿರುವುದರಿಂದ ಹೆಚ್ಚು ಮಂದಿ ಯುವಕರು ಒಲುವು ತೋರಿದ್ದಾರೆ. ಆದರೇ ಕೊಂಡೊಯ್ಯವುದು ಕಷ್ಟ. ದಾರಿಯಲ್ಲಿ ಪೊಲೀಸರ ವಿಚಾರಣೆ ಹೆಚ್ಚಾಗಿದೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ರೈತ ವೆಂಕಟೇಶ್.
‘ಈ ಬಾಗದ ಹಳ್ಳಿಕಾರ್ ಎತ್ತು ಅಂದರೆ ಬಹಳ ಪ್ರಖ್ಯಾತಿ. ವ್ಯವಸಾಯಕ್ಕೆ ಉತ್ತಮ. 8 ರಿಂದ 10 ವರ್ಷ ಬೆಸಾಯ ಮಾಡಬಹುದು. ಪತ್ರಿ ವರ್ಷ್ ಈ ಜಾತ್ರೆಗೆ 25 ರಿಂದ 30 ಮಂದಿ ಬರುತ್ತೇವೆ. ಒಮ್ಮೆ ನಮಗೆ ಕನಿಷ್ಠ 25 ಜೋಡಿ ಎತ್ತು ಬೇಕಾಗುತ್ತದೆ. ಆದರೆ ಇಷ್ಟು ಸಿಗುವುದು ಅನಮಾನ’ ಎನ್ನುವುದು ನರಸಾಪರದ ರೈತ ನಾರಾಯಣಸ್ವಾಮಿ ಅವರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.