ADVERTISEMENT

ಮಾವಿಗೆ ಸಿಕ್ಕಿತು ಹೆಚ್ಚಿನ ಬೆಲೆ

ಪ್ರಸಕ್ತ ವರ್ಷ ಕಡಿಮೆಯಾದ ಬೆಳೆ ಪ್ರಮಾಣ; ಏರಿದ ಬೆಲೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:19 IST
Last Updated 7 ಜೂನ್ 2020, 16:19 IST
ಶ್ರೀನಿವಾಸಪುರದ ಎಪಿಎಂಸಿ ಮಾರುಕಟ್ಟೆಯ ಮಂಡಿಯೊಂದರಲ್ಲಿ ವಾಹನಗಳಿಂದ ಮಾವಿನ ಕಾಯಿ ಇಳಿಸಿ ರಾಶಿ ಹಾಕುತ್ತಿರುವುದು.
ಶ್ರೀನಿವಾಸಪುರದ ಎಪಿಎಂಸಿ ಮಾರುಕಟ್ಟೆಯ ಮಂಡಿಯೊಂದರಲ್ಲಿ ವಾಹನಗಳಿಂದ ಮಾವಿನ ಕಾಯಿ ಇಳಿಸಿ ರಾಶಿ ಹಾಕುತ್ತಿರುವುದು.   

ಶ್ರೀನಿವಾಸಪುರ: ಈ ಬಾರಿ ಮಾವಿನ ಕಾಯಿಗೆ ಒಳ್ಳೆ ಬೆಲೆ ಬಂದಿದೆ. ಇದು ಮಾವು ಬೆಳೆಗಾರರ ಸಂತೋಷಕ್ಕೆ ಕಾರಣವಾಗಿದೆ. ಬಲಿತ ಕಾಯಿಗಳನ್ನು ಕೊಯ್ಲುಮಾಡಿ ತಂದು ಮಾರುಕಟ್ಟೆಯಲ್ಲಿ ರಾಶಿ ಹಾಕುತ್ತಿದ್ದಾರೆ.

‘ರಸ ತಯಾರಿಸಲು ಬಳಸುವ ತೊತಾಪುರಿ ಮಾವು ಆರಂಭದಲ್ಲಿಯೇ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ರಸ ತಯಾರಿಕೆಗೆ ಹೋಗುವ ಕಾಯಿ ಟನ್‌ಗೆ ₹20 ಸಾವಿರದಂತೆ ಮಾರಾಟ ವಾಗುತ್ತಿದೆ. ಕಳೆದ ವರ್ಷ ₹18 ಸಾವಿರದ ವರೆಗೆ ಮಾತ್ರ ಬೆಲೆ ಸಿಕ್ಕಿತ್ತು. ಬಣ್ಣದ ಕಾಯಿಯನ್ನು ತಿನ್ನಲು ಖರೀದಿಸಲಾಗುತ್ತದೆ. ಅಂಥ ಕಾಯಿಯ ಬೆಲೆ ಟನ್‌ಗೆ ₹25 ಸಾವಿರದಂತೆ ಖರೀದಿಯಾಗುತ್ತಿದೆ. ಉಳಿದಂತೆ ಬಾದಾಮಿ, ಮಲ್ಲಿಕಾ, ಬೇನಿಷಾ ತಳಿಯ ಮಾವಿನ ಕಾಯಿ ಟನ್‌ಗೆ ₹40 ಸಾವಿರದಂತೆ ಮಾರಾಟವಾಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವೇಣು ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಹೆಚ್ಚಿನ ಸಂಖ್ಯೆಯ ಮಾವು ಬೆಳೆಗಾರರು ಎಳೆ ಕಾಯಿ ಕಿತ್ತು ಮಾರುಕಟ್ಟೆಗೆ ಹಾಕಿದ್ದಾರೆ. ಇದರಿಂದಾಗಿ ದಿನ ಕಳೆದಂತೆ ಮಾರುಕಟ್ಟೆಗೆ ಮಾವಿನ ಆವಕದ ಪ್ರಮಾಣ ಕಡಿಮೆಯಾಗುತ್ತಿದೆ. ರೈತರು ಮಾರುಕಟ್ಟೆಗೆ ಕಾಯಿ ಹಾಕುವ ಬದಲಿಗೆ, ಫಸಲನ್ನು ತೋಟಗಳ ಮೇಲೆ ಮಾರಿ ಕೈತೊಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೊಯ್ಲು ಮಾಡಿದ ಮಾವನ್ನು ತೊಟಗಳಲ್ಲಿಯೇ ಮಾರುತ್ತಿದ್ದಾರೆ.

ADVERTISEMENT

‘ತೋಟದ ಬಳಿ ಕಾಯಿ ಮಾರಾಟ ಮಾಡುವುದರಿಂದ ಶೇ 10ರಷ್ಟು ಕಮಿಷನ್ ಹಣ ಉಳಿಯುತ್ತದೆ. ಸಾಗಾಣಿಕೆ ವೆಚ್ಚ ಬರುವುದಿಲ್ಲ’ ಎಂದು ಮಾವು ಬೆಳೆಗಾರ ನಾರಾಯಣಸ್ವಾಮಿ ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದರಿಂದ, ಕೆಲವು ರೈತರು ತೋಟಗಳಲ್ಲಿ ಫಸಲನ್ನು ಮಾರುತ್ತಿದ್ದಾರೆ.

‘ಆನ್‌ಲೈನ್‌ ಮಾರಾಟ ಗರಿಗೆದರಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಮಾವಿನ ಮಾರಾಟ ಹೆಚ್ಚಿದೆ. ನಿರೀಕ್ಷೆಗೆ ಮೀರಿದ ಬೆಲೆಯೂ ಸಿಗುತ್ತಿದೆ’ ಎಂಬುದು ಮಾವು ಬೆಳೆಗಾರರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.