ADVERTISEMENT

ಮಾವಹಳ್ಳಿ ಮಹಿಳೆಯರ ಮೌನ ಹೋರಾಟ

ಸರ್ಕಾರಿ ಜಾಗ ಅತಿಕ್ರಮಣ: ತೆರವಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:15 IST
Last Updated 2 ಅಕ್ಟೋಬರ್ 2022, 5:15 IST
ಬಂಗಾರಪೇಟೆಯ ತಹಶೀಲ್ದಾರ್ ಕಚೇರಿ ಮುಂಭಾಗ ಮಾವಹಳ್ಳಿ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದರು
ಬಂಗಾರಪೇಟೆಯ ತಹಶೀಲ್ದಾರ್ ಕಚೇರಿ ಮುಂಭಾಗ ಮಾವಹಳ್ಳಿ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದರು   

ಬಂಗಾರಪೇಟೆ: ಮಾವಹಳ್ಳಿ ಗ್ರಾಮದಲ್ಲಿರುವ ಗ್ರಾಮ ಠಾಣೆ ಹಾಗೂ ಸರ್ಕಾರಿ ಕುಂಟೆಯನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಗಡಿಗುರುತಿಸಬೇಕು ಎಂದು ಒತ್ತಾಯಿಸಿ ಗ್ರಾಮದ ಮಹಿಳೆಯರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ರಾಮಾಂಜಿ ಮಾತನಾಡಿ, ಮಾವಹಳ್ಳಿ ಗ್ರಾ.ಪಂ. ಪಕ್ಕದಲ್ಲಿರುವ ಸರ್ವೆ ನಂ 6ರಲ್ಲಿ ವೇಣುಗೋಪಾಲಸ್ವಾಮಿ ದೇವಾಲಯದ ಇನಾಂತಿ ಹಾಗೂ ಸರ್ವೆ ನಂ. 11ರಲ್ಲಿ ದೋಬಿ ಇನಾಂತಿ ಜಮೀನು ಇದೆ. ಇದರ ಪಕ್ಕದಲ್ಲಿ ಸರ್ಕಾರಿ ಕುಂಟೆಯಿದೆ. ಅದನ್ನುಗ್ರಾಮದ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂದು
ದೂರಿದರು.

ಗ್ರಾಮದಲ್ಲಿ ಸ್ತ್ರಿಶಕ್ತಿ ಸಂಘಗಳಿಗೆ ಸಮುದಾಯ ಭವನ, ಸರ್ಕಾರಿ ಆಸ್ಪತ್ರೆ ಹಾಗೂ ಸಾರ್ವಜನಿಕ ಶೌಚಾಲಯ ಕಟ್ಟಲು ಸ್ಥಳವಿಲ್ಲದೆ ಅವ್ಯವಸ್ಥೆ ಉಂಟಾಗಿದೆ. ಈ ಬಗ್ಗೆ ಹಿಂದೆಯೂ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

ತಾಲ್ಲೂಕು ಆಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ಕುಂಟೆಯನ್ನು ಮುಚ್ಚಿ ಒತ್ತುವರಿ ಮಾಡಿಕೊಂಡಿರುವುದನ್ನು ಗ್ರಾಮಸ್ಥರು ಪ್ರಶ್ನಿಸಿದರೆ ದೌರ್ಜನ್ಯ ಎಸಗಲಾಗುತ್ತಿದೆ. ಒತ್ತುವರಿಯಾಗಿರುವ ಜಾಗವನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಕೊಟ್ಟು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.‌

ಮನವಿ ಸ್ವೀಕರಿಸಿದತಹಶೀಲ್ದಾರ್ ಎಂ. ದಯಾನಂದ್ ಅವರು, ವಾರದೊಳಗೆ ಸೂಕ್ತ ಕ್ರಮವಹಿಸಿ ವರದಿ ನೀಡಲು ಸ್ಥಳದಲ್ಲೇ ಗ್ರಾಮದ ಆರ್‌ಐ ಅವರಿಗೆ ನಿರ್ದೇಶನ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.