ADVERTISEMENT

ದೇಗುಲದಲ್ಲಿ ಊಟ: ಟೆಂಟ್‍ನಲ್ಲಿ ನಿದ್ರೆ

ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ಎಚ್‌ಡಿಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 18:14 IST
Last Updated 20 ನವೆಂಬರ್ 2022, 18:14 IST
ಕೋಲಾರದ ಮಾಲೂರು ತಾಲ್ಲೂಕಿ ನಲ್ಲಿ ಮಹಿಳೆಯೊಬ್ಬರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿಲಕ ಇಟ್ಟರು
ಕೋಲಾರದ ಮಾಲೂರು ತಾಲ್ಲೂಕಿ ನಲ್ಲಿ ಮಹಿಳೆಯೊಬ್ಬರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿಲಕ ಇಟ್ಟರು   

ಕೋಲಾರ: ಜೆಡಿಎಸ್‌ನ ಮಹತ್ವಾಕಾಂಕ್ಷೆಯ ‘ಪಂಚರತ್ನ’ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಲು ಗ್ರಾಮಗಳಿಗೆ ತೆರಳುತ್ತಿರುವ ಎಚ್.ಡಿ.ಕುಮಾರಸ್ವಾಮಿ ಶನಿವಾರ ರಾತ್ರಿ ಬಂಗಾರಪೇಟೆ ತಾಲ್ಲೂಕಿನ ಮಾಗೇರಿ ಹಾಗೂ ಭಾನುವಾರ ರಾತ್ರಿ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು.

ಮಾಗೇರಿಯಲ್ಲಿ ಮಧ್ಯ ರಾತ್ರಿಯ ವರೆಗೆ ನಡೆದ ಸಂವಾದದ ವೇಳೆ ರೈತರು ಬೆಳೆ ನಷ್ಟ ಪರಿಹಾರ ಸಿಕ್ಕಿಲ್ಲ ವೆಂದು ದೂರಿದರೆ, ಪಿಂಚಣಿ, ಮಾಸಾಶನ ಸಿಕ್ಕಿಲ್ಲವೆಂದು ವೃದ್ಧರು, ಅಂಗವಿಕಲರು ಸಮಸ್ಯೆ ಹೇಳಿಕೊಂಡರು. ವೆಂಕಟರಮಣ ದೇಗುಲದಲ್ಲಿ ಮುದ್ದೆ, ಅವರೆಕಾಳು ಸಾರಿನ ಊಟ ಮಾಡಿ ಟೆಂಟ್‍ನಲ್ಲಿ ಮಲಗಿದರು.

ಬೆಳಿಗ್ಗೆ ದೇವರ ದರ್ಶನದ ಬಳಿಕ ಪಕ್ಷದ ಸಂಭವನೀಯ ಅಭ್ಯರ್ಥಿಗಳನ್ನು ಪಂಚರತ್ನ ವಾಹನದಲ್ಲಿ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಂಡು ಮಾಲೂರು ತಾಲ್ಲೂಕಿನತ್ತ ತೆರಳಿದರು. ಕೆಂಪಸಂದ್ರ ಗ್ರಾಮದ ಬಳಿ ದಾರಿಯಲ್ಲಿ ವೃದ್ಧರೊಬ್ಬರು ಕಾರು ಅಡ್ಡಹಾಕಿ ಹಸ್ತಲಾಘವ ನೀಡಿದರು. ಕಾರ್ಯಕರ್ತರು ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿದರು.

ADVERTISEMENT

ಭಾನುವಾರ ಮಾಸ್ತಿಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸ್ತ್ರಿಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ವೃದ್ಧರಿಗೆ ಪ್ರತಿ ತಿಂಗಳು ₹5 ಸಾವಿರ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ತಲಾ ₹ 2,500 ಮಾಸಾಶನ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ಕೊರೆವ ಚಳಿಯಲ್ಲೂ, ರಾತ್ರಿ 10 ಗಂಟೆಯಾದರೂ ಮಕ್ಕಳು, ಮಹಿಳೆಯರು, ಯುವಕರು ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ನನ್ನ ಮುಂದಿನ ನೂರು ದಿನಗಳ ಹೋರಾಟಕ್ಕೆ ಉತ್ಸಾಹ ತುಂಬಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.