ADVERTISEMENT

ಕೋಲಾರ: ದೇಗುಲದ ಮುಂದೆ ಮಾಂಸ ತ್ಯಾಜ್ಯ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರಹಳ್ಳಿ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:32 IST
Last Updated 26 ಜುಲೈ 2021, 4:32 IST

ಕೋಲಾರ: ದೇವಾಲಯದ ಮುಂಭಾಗ ದನ, ಕೋಳಿ ಮಾಂಸದ ತ್ಯಾಜ್ಯಗಳನ್ನು ಟೆಂಪೊ, ದ್ವಿಚಕ್ರವಾಹನಗಳಲ್ಲಿ ತುಂಬಿಕೊಂಡು ಬಂದು ಸುರಿಯುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅರಹಳ್ಳಿ ಗ್ರಾಮಸ್ಥರು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಅರಹಳ್ಳಿಯ ಮೂಲಕ ಹಾದುಹೋಗಿರುವ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಬಳಿ ಪುರಾತನ ಗಣೇಶನ ದೇವಾಲಯವಿದೆ. ಕೋಲಾರ ನಗರದ ಮಾಂಸದ ತ್ಯಾಜ್ಯವನ್ನು ತುಂಬಿಕೊಂಡು ಬಂದು ದೇವಾಲಯದ ಮುಂಭಾಗ ಹಾಗೂ ದೇವಾಲಯದ ಆಸುಪಾಸಿನಲ್ಲಿ ಸುರಿಯುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರಹಳ್ಳಿ ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದೆ. ಗ್ರಾಮದ ಮುಖಾಂತರ ಹಾದುಹೋಗಿರುವ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಬಳಿ ಪುರಾತನ ಗಣೇಶನ ದೇವಾಲಯವಿದೆ. ಇಲ್ಲಿ ಕೆರೆಯ ರಾಜ ಕಾಲುವೆ ಹಾದುಹೋಗುವುದರಿಂದ ಈ ಪ್ರದೇಶದಲ್ಲಿ ಕಲುಷಿತ ವಾತಾವರಣ ಉಂಟಾಗಿ ದುರ್ವಾಸನೆಯಿಂದ ಕೂಡಿದೆ ಎಂದು ದೂರಿದರು.

ADVERTISEMENT

ನೀರಿನ ಜೊತೆ ಈ ತ್ಯಾಜ್ಯ ಸೇರಿ ಹಲವಾರು ಕಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ. ರಾತ್ರಿವೇಳೆ ನಾಯಿಗಳ ಹಿಂಡು ತುಂಬಿಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಶಾಲಾ ವಿದ್ಯಾರ್ಥಿಗಳು, ರೈತರು ಸಹ ಅನೇಕ ಬಾರಿ ನಾಯಿ ಕಡಿತಕ್ಕೆ ಒಳಗಾಗಿರುತ್ತಾರೆ. ಈ ಕುರಿತು ನಗರಸಭೆ ಹಾಗೂ ರಹಮತ್ ನಗರದ ಸುತ್ತಲಿನ ಅಂಗಡಿ ಮಾಲೀಕರಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಅನೇಕ ಬಾರಿ ಈ ಸ್ಥಳದಲ್ಲಿ ತ್ಯಾಜ್ಯ ಸಮೇತ ಹಿಡಿದ ಉದಾಹರಣೆಗಳಿವೆ. ಅಲ್ಲಿನ ಮುಖಂಡರಿಗೆ ತಿಳಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ದೇವಾಲಯ ಇರುವುದರಿಂದ ಮಹಿಳೆಯರು, ಮಕ್ಕಳು ಪೂಜೆ ಮಾಡಲು ಬರುತ್ತಿದ್ದು ತೊಂದರೆಯಾಗುತ್ತಿದೆ ಎಂದರು.

ಕೆಲವು ಸಂದರ್ಭದಲ್ಲಿ ಕಿಡಿಗೇಡಿಗಳು ಅನುಚಿತವಾಗಿ ವರ್ತನೆ ಮಾಡುತ್ತಾರೆ. ಇದರಿಂದ ಗ್ರಾಮಸ್ಥರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದರು.

ಗ್ರಾಮದ ಮುಖಂಡರಾದ ಜಿ. ಅಶ್ವತನಾರಾಯಣ, ಜಿ. ಕಲ್ಯಾಣಕುಮಾರ್, ಎ.ಟಿ. ಜಗದೀಶ್, ಸುರೇಶ್‍ಗೌಡ, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.