ADVERTISEMENT

ಕೋಲಾರ ಜಿಲ್ಲೆಗೆ ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ: ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 13:58 IST
Last Updated 6 ಮೇ 2021, 13:58 IST
ಸಂಸದ ಎಸ್‌.ಮುನಿಸ್ವಾಮಿ ಅವರು ಬೆಂಗಳೂರಿನ ಬುರುಕ ಗ್ಯಾಸ್ ಲಿಮಿಟೆಡ್ ಘಟಕಕ್ಕೆ ಬುಧವಾರ ರಾತ್ರಿ ಖುದ್ದು ತೆರಳಿ ಜಿಲ್ಲೆಗೆ ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಿಸಿದರು.
ಸಂಸದ ಎಸ್‌.ಮುನಿಸ್ವಾಮಿ ಅವರು ಬೆಂಗಳೂರಿನ ಬುರುಕ ಗ್ಯಾಸ್ ಲಿಮಿಟೆಡ್ ಘಟಕಕ್ಕೆ ಬುಧವಾರ ರಾತ್ರಿ ಖುದ್ದು ತೆರಳಿ ಜಿಲ್ಲೆಗೆ ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಿಸಿದರು.   

ಕೋಲಾರ: ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ವೈದ್ಯಕೀಯ ಆಮ್ಲಜನಕದ ಬೇಡಿಕೆಗೆ ಸ್ಪಂದಿಸಿ ಬುಧವಾರ ರಾತ್ರೋರಾತ್ರಿ ಕಾರ್ಯಾಚರಣೆಗಿಳಿದ ಸಂಸದ ಎಸ್‌.ಮುನಿಸ್ವಾಮಿ ಅವರು ಆಮ್ಲಜನಕದ ವ್ಯವಸ್ಥೆ ಮಾಡಿಕೊಟ್ಟು ಜನಪರ ಕಾಳಜಿ ಮೆರೆದಿದ್ದಾರೆ.

ಜಿಲ್ಲೆಯ ಮಾಲೂರು ತಾಲ್ಲೂಕಿನ ಶ್ರೀ ವೆಂಕಟೇಶ್ವರ ಏರ್‌ ಪ್ರಾಡಕ್ಟ್ಸ್‌ ಕಂಪನಿಗೆ ಸೇರಿದ ಲಾರಿಯು ಜಿಲ್ಲೆಗೆ ಅತ್ಯಗತ್ಯವಾಗಿ ಬೇಕಿದ್ದ ವೈದ್ಯಕೀಯ ಆಮ್ಲಜನಕ ತುಂಬಿಸಿಕೊಂಡು ಬರಲು ಬೆಂಗಳೂರಿನ ಮಹದೇವಪುರದಲ್ಲಿನ ಬುರುಕ ಗ್ಯಾಸ್ ಲಿಮಿಟೆಡ್ ಘಟಕಕ್ಕೆ ಹೋಗಿತ್ತು. ಆದರೆ, 24 ತಾಸು ಕಳೆದರೂ ಕಂಪನಿಯವರು ಲಾರಿಗೆ ವೈದ್ಯಕೀಯ ಆಮ್ಲಜನಕ ತುಂಬಿಸಿರಲಿಲ್ಲ.

ಈ ಸಂಗತಿ ತಿಳಿದ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಬುಧವಾರ ರಾತ್ರಿ ಸಂಸದ ಮುನಿಸ್ವಾಮಿ ಅವರಿಗೆ ಕರೆ ಮಾಡಿ ಜಿಲ್ಲೆಗೆ ತುರ್ತಾಗಿ ಆಮ್ಲಜನಕದ ವ್ಯವಸ್ಥೆ ಮಾಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು ತಡ ಮಾಡದೆ ರಾತ್ರಿಯೇ ಖುದ್ದು ಬುರುಕ ಗ್ಯಾಸ್ ಲಿಮಿಟೆಡ್ ಘಟಕಕ್ಕೆ ತೆರಳಿ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಡಿಮೆ ಅವಧಿಯಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿಸಿದ್ದಾರೆ.

ADVERTISEMENT

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಸದ ಮುನಿಸ್ವಾಮಿ, ‘ಬುರುಕ ಗ್ಯಾಸ್ ಲಿಮಿಟೆಡ್ ಘಟಕದಿಂದ ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಘಟಕದ ಮೇಲೆ ಹೆಚ್ಚಿನ ಒತ್ತಡವಿದೆ. ಜಿಲ್ಲೆಗೆ ತುರ್ತಾಗಿ ಅಗತ್ಯವಿರುವ ಆಮ್ಲಜನಕ ಕೊಂಡೊಯ್ಯಲು ಮಾಲೂರಿನಿಂದ ಬಂದಿದ್ದ ಲಾರಿಗೆ ಆಮ್ಲಜನಕ ತುಂಬಿಸಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.

‘ಆಮ್ಲಜನಕ ಲಭ್ಯವಾಗದ ಬಗ್ಗೆ ಜಿಲ್ಲಾಧಿಕಾರಿ ನನಗೆ ಮಾಡಿದರು. ಬಳಿಕ ನಾನು ತಡ ಮಾಡದೆ ಬುರುಕ ಗ್ಯಾಸ್ ಲಿಮಿಟೆಡ್ ಘಟಕಕ್ಕೆ ತೆರಳಿ ಬೆಂಗಳೂರಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಆಮ್ಲಜನಕದ ವ್ಯವಸ್ಥೆ ಮಾಡಿಸಿದೆ’ ಎಂದು ಹೇಳಿದರು.

ಜಾಗೃತರಾಗಿಲ್ಲ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಗಣನೀಯವಾಗಿ ಏರಿಕೆಯಾಗಿದ್ದರೂ ಜನ ಜಾಗೃತರಾಗಿಲ್ಲ. ಜನ ಲಾಕ್‌ಡೌನ್‌ ಲೆಕ್ಕಿಸದೆ ಮನೆಯಿಂದ ಹೊರ ಬಂದು ಬೇಜವಾಬ್ದಾರಿಯುತವಾಗಿ ರಸ್ತೆಗಳಲ್ಲೇ ಓಡಾಡುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕಕ್ಕಾಗಿ ದೊಡ್ಡಬಳ್ಳಾಪುರ, ಬಳ್ಳಾರಿ, ಬೆಂಗಳೂರು ಸೇರಿದಂತೆ ವಿವಿಧೆಡೆ ಅಲೆದಾಡುವ ಪರಿಸ್ಥಿತಿಯಿದೆ. ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ಒತ್ತಡ ಎದುರಿಸಲಾಗುತ್ತಿದೆ’ ಎಂದು ವಿವರಿಸಿದರು.

ರಾಜಕೀಯ ಬದಿಗಿಡಿ: ‘ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಕೋವಿಡ್‌ ನಿಯಂತ್ರಣಕ್ಕೆ ಶಕ್ತಿಮೀರಿ ಪ್ರಯತ್ನಪಟ್ಟರೂ ಜನ ಎಚ್ಚೆತ್ತುಕೊಳ್ಳದಿದ್ದರೆ ಏನೂ ಪ್ರಯೋಜನವಿಲ್ಲ. ಒಂದೊಂದು ಜೀವವೂ ಮುಖ್ಯ. ಜಿಲ್ಲೆಯ ಜನರು ಕೋವಿಡ್‌ ಮಾರ್ಗಸೂಚಿ ಮತ್ತು ಜನತಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ ಜನಪ್ರತಿನಿಗಳು ರಾಜಕೀಯ ಬದಿಗಿಟ್ಟು ಕೊರೊನಾ ಸೋಂಕಿನ ತಡೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಜತೆ ಚರ್ಚಿಸಿದ್ದೇವೆ. ವೈದ್ಯಕೀಯ ಆಮ್ಲಜನಕದ ಕೊರತೆ ಆಗದಂತೆ ಕೋಲಾರದಲ್ಲಿ ಘಟಕ ನಿರ್ಮಿಸಲಾಗುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.