ADVERTISEMENT

ಮೇಕೆದಾಟು: ಜಿಲ್ಲೆ ಸೇರ್ಪಡೆಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 14:25 IST
Last Updated 25 ಸೆಪ್ಟೆಂಬರ್ 2021, 14:25 IST
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಮತ್ತು ಸಂಸದ ಎಸ್.ಮುನಿಸ್ವಾಮಿ ಕೋಲಾರದಲ್ಲಿ ಶನಿವಾರ ಕೋಲಾರಮ್ಮ ಕೆರೆಗೆ ಬಾಗಿನ ಅರ್ಪಿಸಿದರು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದಾರೆ
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಮತ್ತು ಸಂಸದ ಎಸ್.ಮುನಿಸ್ವಾಮಿ ಕೋಲಾರದಲ್ಲಿ ಶನಿವಾರ ಕೋಲಾರಮ್ಮ ಕೆರೆಗೆ ಬಾಗಿನ ಅರ್ಪಿಸಿದರು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದಾರೆ   

ಕೋಲಾರ: ‘ಮೇಕೆದಾಟು ಯೋಜನೆ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್‌) ಜಿಲ್ಲೆಯನ್ನು ಸೇರ್ಪಡೆ ಮಾಡಿ ಕುಡಿಯುವ ನೀರು ಒದಗಿಸಲು ಪ್ರಯತ್ನಿಸುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.

ನಗರದ ಕೋಲಾರಮ್ಮ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಮಾತನಾಡಿ, ‘ಎತ್ತಿನ ಹೊಳೆ ಮತ್ತು ಯರಗೋಳ್‌ ಯೋಜನೆ ಜತೆಗೆ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಮೇಕೆದಾಟು ಯೋಜನೆಯಲ್ಲಿ ಜಿಲ್ಲೆಗೆ ಕುಡಿಯುವ ನೀರು ಕೊಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

‘₹ 80 ಲಕ್ಷ ವೆಚ್ಚದಲ್ಲಿ ಕೋಲಾರಮ್ಮ ಮತ್ತು ಮುದುವಾಡಿ ಕೆರೆ ಸ್ವಚ್ಛಗೊಳಿಸಲಾಗಿದೆ. ಕೋಲಾರಮ್ಮ ಕೆರೆಯ 25 ಎಕರೆ ಒತ್ತುವರಿ ತೆರವುಗೊಳಿಸಿದ್ದು, ಇದೀಗ ಕೆರೆ ಭರ್ತಿಯಾಗಿ 20 ವರ್ಷಗಳ ನಂತರ ಕೋಡಿ ಹರಿದಿದೆ. ಕೆರೆ ತುಂಬಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಬರುವಂತೆ ಮಾಡುತ್ತೇವೆ’ ಎಂದರು.

ADVERTISEMENT

‘1880ರಲ್ಲಿ 872 ಎಕರೆ ವಿಸ್ತಾರವಾಗಿ ಕೋಲಾರಮ್ಮ ಕೆರೆ ನಿರ್ಮಾಣವಾಯಿತು. ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ 5 ಹಳ್ಳಿಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಅಭಿಪ್ರಾಯಪಟ್ಟರು.

‘ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಜಿಲ್ಲೆಗೆ ಹೆಚ್ಚಿನ ಅನುದಾನ ತರುತ್ತೇವೆ. ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡುತ್ತೇವೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರಸಭೆ ನಾಮನಿರ್ದೇಶಿತ ಸದಸ್ಯ ವೆಂಕಟೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.