ಕೋಲಾರ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರನ್ನು ಹತ್ಯೆ ಮಾಡಿ ಇಷ್ಟು ದಿನ ಕಳೆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸುಮ್ಮನೆ ಯುದ್ಧ ವಿಮಾನಗಳನ್ನು ಆಕಾಶದಲ್ಲಿ ಹಾರಾಡಿಸಿಕೊಂಡು ದೇಶದ ಜನತೆ ಮುಂದೆ ನಾಟಕ ಪ್ರದರ್ಶಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯದಲ್ಲಿ ಸತ್ತವರು ನಮ್ಮ ಅಣ್ಣ ತಮ್ಮಂದಿರು. ಇದು ಬಹಳ ಘೋರವಾದ ವಿಚಾರ. ಇನ್ನೂ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಕೆಂದ್ರ ಸರ್ಕಾರ ಮೊದಲು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ನಮ್ಮ ಜಾಗಕ್ಕೆ ಬಂದು ಭಯೋತ್ಪಾದಕರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕ 26 ಮಂದಿಯನ್ನು ಬಲಿ ಪಡೆದಿದ್ದರೂ ಕೇಂದ್ರ ಸರ್ಕಾರ ಈವರೆಗೆ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ಶೋಭೆ ತರುವುದಿಲ್ಲ’ ಎಂದರು.
‘ಭಯೋತ್ಪಾದಕರ ದಾಳಿ ನಡೆಸಿದ ತಕ್ಷಣ ಕೇಂದ್ರ ಸರ್ಕಾರ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರು ನಿಲ್ಲಿಸಿರುವುದಾಗಿ ಹೇಳುತ್ತಿದೆ. ಆದರೆ, ಅದು ಸಾಧ್ಯವೇ? ಸಿಂಧೂ ನದಿ ನೀರನ್ನು ನಿಲ್ಲಿಸಲು ಬೃಹತ್ ಅಣೆಕಟ್ಟು ಕಟ್ಟಬೇಕು. ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಬೇರೊಂದು ಕಡೆ ಹರಿಸಲು ಲಕ್ಷಾಂತರ ಹಣ ಬೇಕು .ಇದೆಲ್ಲಾ ಕೇಂದ್ರ ಸರ್ಕಾರದ ಗಿಮ್ಮಿಕ್, ದೇಶದ ಜನರನ್ನು ಯಾಮಾರಿಸುತ್ತಿದೆ ಅಷ್ಟೇ. ದೇಶದಿಂದ ಪಾಕಿಸ್ತಾನಕ್ಕೆ ರಪ್ತು ಆಗುವ ಔಷಧಿಗಳನ್ನು ನಿಲ್ಲಿಸಿದ್ದಲ್ಲಿ ಪಾಕಿಸ್ತಾನದಲ್ಲಿರುವ ಅರ್ಥದಷ್ಟು ಜನ ಮೂರು ದಿನಗಳಲ್ಲಿ ಸಾಯುತ್ತಾರೆ’ ಎಂದು ನುಡಿದರು.
‘ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರವು ಸ್ವಾಗತಾರ್ಹ. ದೇಶದಲ್ಲಿ ಯಾವ ಯಾವ ಸಮುದಾಯಗಳ ಜನಸಂಖ್ಯೆ ಎಷ್ಟಿದೆ ಇದೆ ಎಂಬುದು ತಿಳಿದುಕೊಂಡರೇ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ‘ಕುಡಾ’ ಅಧ್ಯಕ್ಷ ಮಹಮದ್ ಹನೀಫ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಕಠಾರಿಪಾಳ್ಯ ಅಮರ್, ಜಂಬಾಪುರ ವೆಂಕಟರಾಮ್, ಉರಟ ಅಗ್ರಹಾರ ಚೌಡರೆಡ್ಡಿ, ತಿಪ್ಪೇನಹಳ್ಳಿ ನಾಗೇಶ್, ಚಿನ್ನಾಪುರ ನಾರಾಯಣಸ್ವಾಮಿ, ಸಿಎಂಎಂ ಮಂಜುನಾಥ್, ಸೈಫ್ ಇದ್ದರು.
ಉಗ್ರರು ದಾಳಿ ನಡೆಸಿದ ತಕ್ಷಣ ಎಚ್ಚೆತ್ತುಕೊಂಡಿದ್ದರೆ ಅವರು ನಮ್ಮ ದೇಶದ ಒಳಗಡೆಯೇ ಸಿಗುತ್ತಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಲೋಪ ಎದ್ದು ಕಾಣುತ್ತಿದೆ.–ಕೊತ್ತೂರು ಮಂಜುನಾಥ್, ಶಾಸಕ
ಬೆಟ್ಟಿಂಗ್: ಪೊಲೀಸರ ವಿರುದ್ಧ ಅಸಮಾಧಾನ
‘ಮುಳಬಾಗಿಲು ಮಾತ್ರವಲ್ಲ; ಕೋಲಾರದಲ್ಲೂ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುತ್ತಿದೆ. ಬೆಟ್ಟಿಂಗ್ ದಂದೆಯಿಂದ ಎಷ್ಟೋ ಅಮಾಯಕ ಯುವಕರು ಬಲಿಯಾಗಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಬೆಟ್ಟಿಂಗ್ ದಂದೆಯಿಂದ ದ್ವಿಚಕ್ರ ವಾಹನ ಮನೆ ಮಾರಿಕೊಂಡಿರುವ ಉದಾಹರಣೆಗಳೂ ಇವೆ. ಬೆಟ್ಟಿಂಗ್ ದಂದೆ ಕುರಿತು ಇಂಚಿಂಚು ಮಾಹಿತಿ ಪೊಲೀಸರಿಗೆ ಗೊತ್ತಿದೆ. ಆದರೆ ಪೊಲೀಸರೇ ಅವರನ್ನು ಬಿಟ್ಟುಬಿಟ್ಟಿದ್ದಾರೆ’ ಎಂದು ಕೊತ್ತೂರು ಮಂಜುನಾಥ್ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ: ಅಧಿಕಾರಿಗಳಿಂದ ಅಕ್ರಮ
‘ಕೋಲಾರ ನಗರಸಭೆಯಲ್ಲಿ ಕೆಲ ಅಧಿಕಾರಿಗಳು 10 ವರ್ಷಗಳಿಂದ ಒಂದೇಕಡೆ ಬೇರೂರಿದ್ದು ಸಾಕಷ್ಟು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. ಅವರನ್ನೆಲ್ಲಾ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಿ ಅಲ್ಲಿರುವವರನ್ನು ಕೋಲಾರಕ್ಕೆ ತರಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕೊತ್ತೂರು ಮಂಜುನಾಥ್ ಹೇಳಿದರು. ‘ಬೇರೆ ಜಿಲ್ಲೆಯಿಂದ ಕೋಲಾರಕ್ಕೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಾರೆ. ಉತ್ತಮವಾಗಿ ಜನರಿಗೆ ಸ್ಪಂದಿಸುವ ಅಧಿಕಾರಿಗಳು ನಗರಸಭೆಗೆ ಬಂದರೆ ಅವರನ್ನು ಸ್ವಾಗತಿಸಿ ಸಂಪೂರ್ಣ ಸಹಕಾರ ನೀಡಲಾಗುವುದು. ಅಂತಹ ಅಧಿಕಾರಿಗೆ ಉಚಿತವಾಗಿ ಒಂದು ದ್ವಿಚಕ್ರ ವಾಹನವನ್ನು ನೀಡುತ್ತೇನೆ’ ಎಂದರು.
ಖಾದ್ರಿಪುರ ಜಾಗ ವಾಪಸ್ ಪಡೆಯಲು ಕ್ರಮ
‘ಕೋಲಾರದ ಖಾದ್ರಿಪುರದಲ್ಲಿ ನಗರಸಭೆಗೆ ಸೇರಿದ ಜಾಗವನ್ನು ವಾಪಸ್ ನಗರಸಭೆಗೆ ಪಡೆಯಲು ಈಗಾಗಲೇ ಕ್ರಮ ವಹಿಸಲಾಗಿದೆ. ಕೋಲಾರ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದೇನೆ. ದಾಖಲೆಗಳನ್ನು ತಿರುಚಿ ನಗರಸಭೆ ಆಸ್ತಿಯನ್ನು ಕಬಳಿಸಿದ್ದು ಅತಿ ಶೀಘ್ರದಲ್ಲೇ ನಗರಸಭೆಗೆ ಹಿಂಪಡೆಯುವ ಕೆಲಸ ನಡೆಯುತ್ತದೆ’ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.