ADVERTISEMENT

ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯಲ್ಲ

ಡಿಸಿಸಿ ಬ್ಯಾಂಕ್‌ ಬಗ್ಗೆ ಲಘು ಮಾತು ಬೇಡ; ಶಾಸಕ ರಮೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:49 IST
Last Updated 14 ಜುಲೈ 2020, 17:49 IST
ಶ್ರೀನಿವಾಸಪುರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಸ್ತ್ರೀ ಶಕ್ತಿ ಸಂಘಗಳಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಬಡ್ಡಿ ರಹಿತ ಸಾಲದ ಚೆಕ್‌ ವಿತರಿಸಿದರು
ಶ್ರೀನಿವಾಸಪುರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಸ್ತ್ರೀ ಶಕ್ತಿ ಸಂಘಗಳಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಬಡ್ಡಿ ರಹಿತ ಸಾಲದ ಚೆಕ್‌ ವಿತರಿಸಿದರು   

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌ ಯಾರಪ್ಪನ ಆಸ್ತಿಯೂ ಅಲ್ಲ. ಅದು ಸಾರ್ವಜನಕರು ಬೆಳೆಸಿದ ಒಂದು ಸಂಸ್ಥೆ. ಬಡವರ ಪಾಲಿಗೆ ಕಲ್ಪವೃಕ್ಷವಾಗಿ ಬೆಳೆಯುತ್ತಿದೆ. ಯಾರೇ ಆಗಲಿ ಬ್ಯಾಂಕ್ ಕುರಿತು ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.‌

ಪಟ್ಟಣದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಾಲ್ಲೂಕಿನ ಕೋಡಿಪಲ್ಲಿ ಹಾಗೂ ಅಡ್ಡಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ 87 ಸ್ವ ಸಹಾಯ ಸಂಘಗಳಿಗೆ ₹4.30 ಕೋಟಿ ಶೂನ್ಯ ಬಡ್ಡಿ ಸಾಲ ವಿತರಿಸಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಪಕ್ಷ ಅಥವಾ ಜಾತಿ ಭೇದವಿಲ್ಲದೆ ಪ್ರತಿ ಕುಟುಂಬಕ್ಕೂ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಆರ್ಥಿಕ ನೆರವು, ವಾಸಿಸಲು ಮನೆ, ಭೂರಹಿತರಿಗೆ ಭೂಮಿ ನೀಡುವುದರ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ತಾಲ್ಲೂಕಿನ ಗೌನಿಪಲ್ಲಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ ₹10.80 ಕೋಟಿ, ಕಸಬಾ ವ್ಯಾಪ್ತಿಯಲ್ಲಿ ₹1.60 ಕೋಟಿ ಹಾಗೂ ಯಲ್ದೂರು ಸಹಕಾರ ಸಂಘದ ವ್ಯಾಪ್ತಿಯಲ್ಲಿ ₹2.ಕೋಟಿ ಬಡ್ಡಿ ರಹಿತ ಸಾಲ ನೀಡಲಾಗಿದೆ. ಲಕ್ಷ್ಮೀಪುರ, ಸೋಮಯಾಜಲಹಳ್ಳಿ ಭಾಗದ ಸ್ತ್ರೀ ಶಕ್ತಿ ಸಂಘಗಳು ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಕಮೀಷನ್‌ ರಹಿತವಾಗಿ, ಅತ್ಯಂತ ಪಾರದರ್ಶಕವಾಗಿ ಸಾಲ ವಿತರಣೆ ಮಾಡಲಾಗಿದೆ’ ಎಂದು
ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಸಹಕಾರ ಸಂಘಗಳ ಅಧ್ಯಕ್ಷರಾದ ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ಬೈಚೇಗೌಡ, ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.