ADVERTISEMENT

ಅಧಿಕಾರಿಗಳು, ಬಾಡಿಗೆದಾರರ ನಡುವೆ ದಂಧೆ: ಆರೋಪ

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:14 IST
Last Updated 30 ಜನವರಿ 2026, 6:14 IST
ಮಾಲೂರಿನ ನಗರಸಭೆ ಕಚೇರಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು
ಮಾಲೂರಿನ ನಗರಸಭೆ ಕಚೇರಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು   

ಮಾಲೂರು: ಇಲ್ಲಿನ ನಗರಸಭೆಯಲ್ಲಿ ಅಧಿಕಾರಿಗಳು ಹಾಗೂ ನಗರಸಭೆಗೆ ಸೇರಿದ ಅಂಗಡಿಗಳ ಬಾಡಿಗೆದಾರರ ನಡುವೆ ದಂಧೆ ನಡೆಯುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆಗೆ ಸೇರಿದ ಸುಮಾರು 98 ಮಳಿಗೆಗಳು ಮರು ಹಾರಾಜಿಗೆ ಬಂದಿದೆ. ನಗರಸಭೆಯ ಕೆಲವು ಅಧಿಕಾರಿಗಳು ಬಾಡಿಗೆದಾರರಿಗೆ ಅಕ್ರಮವಾಗಿ ದಾಖಲೆ ಮಾಡಿಕೊಡುತ್ತಿದ್ದರು. ಬಾಡಿಗೆದಾರರು ಕೋರ್ಟ್‌ನಲ್ಲಿ ಕೇವಿಯಟ್ ಹಾಕಿಕೊಳ್ಳುವ ಮೂಲಕ ನಗರಸಭೆಗೆ ಬಾಡಿಗೆ ನೀಡುತ್ತಿರಲಿಲ್ಲ. ನಗರಸಭೆ ಅಧಿಕಾರಿಗಳಿಗೆ ಬಾಡಿಗೆದಾರರು ತಿಂಗಳಿಗೆ ಎರಡ್ಮೂರು ಸಾವಿರ ನೀಡುತ್ತಾ, ದಂಧೆ ನಡೆಸುತ್ತಿದ್ದಾರೆ. ಹಾಗಾಗಿ 98 ಅಂಗಡಿಗಳನ್ನು ಹರಾಜು ಹಾಕುವ ಮುನ್ನವೇ ಕೋರ್ಟ್‌ನಲ್ಲಿ ಕೇವಿಯಟ್ ಹಾಕಿ, ನಂತರ ಹರಾಜು ಪ್ರಕ್ರಿಯೆ ನಡೆಸಬೇಕೆಂದು ನಗರಸಭೆ ಆಯುಕ್ತರಿಗೆ ಮೊದಲೇ ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅದರಲ್ಲಿ ನಗರದಲ್ಲಿ ಮೂರುವರೆ ಕಿ.ಮೀ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು, ಗುತ್ತಿಗೆದಾರರು ಕಾಲಂ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗಾಗಿ ಮುಖ್ಯರಸ್ತೆ ಒತ್ತುವರಿಯನ್ನು ನಗರಸಭೆ ಅಧಿಕಾರಿಗಳು ಕೂಡಲೇ ತೆರವು ಕಾರ್ಯ ನಡೆಸಬೇಕೆಂದು ಸೂಚಿಸಿದರು.

ADVERTISEMENT

ನಗರಸಭೆಗೆ ಸೇರಿದ ಸುಮಾರು 350 ನಿವೇಶನಗಳನ್ನು ಅಕ್ರಮವಾಗಿ ಕೆಲವರು ಮಾಡಿಕೊಂಡಿರುವುದು ತಿಳಿದುಬಂದಿದೆ. ಅವುಗಳನ್ನು ಗುರುತಿಸಿ ಖಾತೆ ರದ್ದು ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು. ಜೊತೆಗೆ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಆಸ್ತಿ ನಗರದಲ್ಲಿದ್ದು, ಅದನ್ನು ಕೆಲವರು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ. ಅಂತಹ ಆಸ್ತಿ ಗುರುತಿಸಿ ಮುಟ್ಟುಗೋಲು ಹಾಕುವಂತೆ  ತಹಶೀಲ್ದಾರ್ ರೂಪ ಅವರಿಗೆ ಸೂಚಿಸಿದರು.

ನಗರದಲ್ಲಿ ನಿವೇಶನ ರಹಿತರು 25 ವರ್ಷಗಳ ಹಿಂದೆ ಆಶ್ರಯ ನಿವೇಶನಗಳಿಗೆ 1,300 ಮಂದಿ ₹35 ಸಾವಿರ ಹಣ ಕಟ್ಟಿದ್ದರು. ಅವರು ಕಟ್ಟಿದ್ದ ಹಣಕ್ಕೆ ಬಡ್ಡಿ ಸೇರಿಸಿ ವಾಪಸ್ ನೀಡಲಾಗಿದೆ. ಶೀಘ್ರ ನಿವೇಶನ ಸಹ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕಿನ ಟೇಕಲ್ ಹೋಬಳಿಯ ಅಗಲುಕೋಟೆ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ 50.26 ಎಕರೆ ಭೂಮಿಯನ್ನು ಕಾನೂನಡಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಒ ಕೃಷ್ಣಪ್ಪ, ನಗರಸಭಾ ಆಯುಕ್ತ ಮಹದೇವು, ಸರ್ಕಲ್ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೇರ, ವಿಜಯ ನರಸಿಂಹ, ಅಫ್ಸರ್ ಪಾಷ, ಹನುಮಂತಪ್ಪ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.