ADVERTISEMENT

ಶಾಸಕರ ಲೆಟರ್‌ ಹೆಡ್‌ ಅಸಲಿಯೋ?

ಕೃಷ್ಣ ವಿರುದ್ಧ ‘ಕೈ’ನೊಳಗಿನ ಮಸಲತ್ತೋ? ಕಿಡಿಗೇಡಿ ಕಿತಾಪತಿಯೋ? ಕಾಂಗ್ರೆಸ್‌ ಶಾಸಕರ ಹೆಸರಲ್ಲಿರೋ ಪತ್ರ

ಕೆ.ಓಂಕಾರ ಮೂರ್ತಿ
Published 21 ಡಿಸೆಂಬರ್ 2025, 5:24 IST
Last Updated 21 ಡಿಸೆಂಬರ್ 2025, 5:24 IST
ತಹಶೀಲ್ದಾರ್‌ಗೆ ಬರೆದಿದ್ದಾರೆ ಎನ್ನಲಾದ ಶಾಸಕರ ಲೆಟರ್‌ ಹೆಡ್‌ ಸ್ವರೂಪದಲ್ಲಿರುವ ಪತ್ರ
ತಹಶೀಲ್ದಾರ್‌ಗೆ ಬರೆದಿದ್ದಾರೆ ಎನ್ನಲಾದ ಶಾಸಕರ ಲೆಟರ್‌ ಹೆಡ್‌ ಸ್ವರೂಪದಲ್ಲಿರುವ ಪತ್ರ   

ಕೋಲಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧದ ಭೂ ಕಬಳಿಕೆ ಆರೋಪ ಸಂಬಂಧ ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಬ್ಬರ ಕೈವಾಡವಿರಬಹುದೆಂಬ ಚರ್ಚೆ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‍ಪತ್ರವೊಂದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ತಾಲ್ಲೂಕಿನ ನರಸಾಪುರ ಹೋಬಳಿಯ ಗರುಡನಪಾಳ್ಯದಲ್ಲಿರುವ ಜಮೀನುಗಳ ದಾಖಲೆ ಕೋರಿ ಜುಲೈ 25ರಂದು ಕೋಲಾರ ತಹಶೀಲ್ದಾರ್‌ಗೆ ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್.ನಾರಾಯಣಸ್ವಾಮಿ ಬರೆದಿದ್ದಾರೆ ಎನ್ನಲಾದ ಪತ್ರವೇ ಈ ಎಲ್ಲ ಕುತೂಹಲ ಹಾಗೂ ಗೊಂದಲಗಳಿಗೆ ಕಾರಣವಾಗಿದೆ.

ಇದೇ ಗ್ರಾಮದ ಸರ್ವೆ ನಂಬರ್‌ 46 ಹಾಗೂ 47ರಲ್ಲಿ ಕೃಷ್ಣಬೈರೇಗೌಡ ಒಟ್ಟು 21.16 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಸಂಬಂಧ ಕೆಲವು ದಾಖಲೆ ಪತ್ರಗಳನ್ನು ಆ ಪಕ್ಷದ ಮುಖಂಡರು ಬೆಳಗಾವಿಯಲ್ಲಿ ಬಿಡುಗಡೆ ಮಾಡಿದ್ದರು. ಆ ದಾಖಲೆ ಬಿಜೆಪಿಗರ ಕೈ ಸೇರಿದ್ದು ಹೇಗೆ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ADVERTISEMENT

ಶಾಸಕರ ವಿಳಾಸದೊಂದಿಗೆ ಲೆಟರ್‌ ಹೆಡ್‌ ಸ್ವರೂಪದಲ್ಲಿರುವ ಪತ್ರವೀಗ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿದೆ. ಸಚಿವ ಕೃಷ್ಣ ಬೈರೇಗೌಡ ವಿರುದ್ಧ ‘ಕೈ’ ಪಕ್ಷದೊಳಗೆ ಮಸಲತ್ತು ನಡೆಯುತ್ತಿದೆಯೋ? ಅಥವಾ ಕಿಡಿಗೇಡಿಗಳ ಕಿತಾಪತಿಯೋ ಎಂಬ ಪ್ರಶ್ನೆ ಎದ್ದಿದೆ. ನಕಲಿಯೋ ಅಸಲಿಯೋ ಎಂದು ನೆಟ್ಟಿಗರು ಗೊಂದಲಕ್ಕೆ ಸಿಲುಕಿದ್ದಾರೆ. 

‘ಈ ‘ಲೆಟರ್‌ ಹೆಡ್‌’ ಅನ್ನು ನಾನು ಕೂಡ ಗಮನಿಸಿದ್ದೇನೆ. ಅದು ನಾನು ಬರೆದಿರುವ ಪ‍ತ್ರ ಅಲ್ಲ. ಗರುಡನಪಾಳ್ಯದಲ್ಲಿ ಕೃಷ್ಣಬೈರೇಗೌಡರಿಗೆ ಸಂಬಂಧಿಸಿದ ಮಾಹಿತಿ ಕೋರಿ ನಾನು ತಹಶೀಲ್ದಾರ್‌ಗೆ ಯಾವುದೇ ಪತ್ರ ಬರೆದಿಲ್ಲ. ಮಾಹಿತಿ ಕೋರುವ ಅಗತ್ಯವೂ ನನಗಿಲ್ಲ. ನನ್ನ ಲೆಟರ್‌ ಹೆಡ್‌ ದುರುಪಯೋಗ ಆಗಿರುವ ಸಾಧ್ಯತೆಯೂ ಇದೆ’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಕೃಷ್ಣಬೈರೇಗೌಡ ವಿರುದ್ಧ ಈಗ ಬಂದಿರುವ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸಿಲ್ಲ. ಆದರೆ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಕಂದಾಯ ಸಚಿವರ ಹೇಳಿಕೆ ಗಮನಿಸಿದಾಗ ಕೇವಲ ರಾಜಕೀಯಕ್ಕಾಗಿ ಬಿಜೆಪಿ ಮಾಡುತ್ತಿರುವ ಷಡ್ಯಂತ್ರವಿದು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಷ್ಟೊಂದು ದೊಡ್ಡ ಜಮೀನ್ದಾರರಾಗಿ ಸಣ್ಣಪುಟ್ಟ ಜಮೀನನ್ನು ಅಕ್ರಮವಾಗಿ ಸೃಷ್ಟಿ ಮಾಡಲು ಹೋಗುವ ಅಗತ್ಯ ಅವರಿಗೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆಯಲು ಕಾರಣವಿದೆ. ಈ ಹಿಂದೆ ವಿಧಾನಸಭೆಯಲ್ಲಿ ನಾರಾಯಣಸ್ವಾಮಿ, ಕಂದಾಯ ಸಚಿವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಗುಡುಗಿದ್ದರು. ಕೃಷ್ಣಬೈರೇಗೌಡ ಸೇರಿದಂತೆ ಜಿಲ್ಲೆಯ ಮೂಲದ ಸಚಿವರು ಕಾಂಗ್ರೆಸ್‌ ಶಾಸಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದಿದ್ದರು. ಇಲಾಖೆ ವಿರುದ್ಧ ಸಹಿ ಸಂಗ್ರಹಕ್ಕೂ ಮುಂದಾಗಿದ್ದರು. ಹೀಗಾಗಿ, ತಹಶೀಲ್ದಾರ್‌ಗೆ ಈ ಪತ್ರವನ್ನು ಅವರೇ ಬರೆದಿದ್ದಾರೆಯೇ? ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸ್ವಪಕ್ಷೀಯರ ಕಿತ್ತಾಟದಲ್ಲಿ ಕೃಷ್ಣಬೈರೇಗೌಡರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆಯೇ ಅಥವಾ ನಕಲಿ ಪತ್ರ ಹರಿಬಿಟ್ಟು ಕಾಂಗ್ರೆಸ್‌ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಷಡ್ಯಂತ್ರವೋ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಪತ್ರದಲ್ಲೇನಿದೆ?: ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದ ಒಟ್ಟು ವಿಸ್ತೀರ್ಣವೆಷ್ಟು? ಗ್ರಾಮದಲ್ಲಿರುವ ‘ಎ’ ಖರಾಬು, ‘ಬಿ’ ಖರಾಬು, ಕೆರೆ, ಕುಂಟೆ, ರಾಜಕಾಲುವೆ, ಸರ್ಕಾರಿ ತೋಪು, ಗೋಮಾಳ ಇನ್ನೂ ಮುಂತಾದ ಗ್ರಾಮದ ಸರಹದ್ದು, ವಿಸ್ತೀರ್ಣ, ಎಷ್ಟು ಎಕರೆ ಜಮೀನು? ಯಾರಯಾರ ಹೆಸರಿನಲ್ಲಿ ಖಾತೆ ಮಾಡಲಾಗಿದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನೀಡಬೇಕೆಂದು ಕೋರಿರುವ ಅಂಶಗಳೂ ಪತ್ರದಲ್ಲಿವೆ.

‘ಗರುಡನಪಾಳ್ಯದಲ್ಲಿರುವ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ನಮ್ಮ ಕಾಲದಲ್ಲಿ ಖರೀದಿಸಿದ್ದಲ್ಲ. ತಾತನವರಿಂದ ಬಂದಿದ್ದು, ಯಾವುದಾದರೂ ತನಿಖೆ ನಡೆಸಲಿ’ ಎಂದು ಈಗಾಗಲೇ ಕೃಷ್ಣಬೈರೇಗೌಡರು ಸದನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ವಿರೋಧ ಪಕ್ಷದವರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಅಕ್ರಮ ನಡೆದಿದೆ ಎಂಬ ಆರೋಪ ಮಾಡುತ್ತಿದ್ದಾರೆ.

ಎಸ್.ಎನ್‌.ನಾರಾಯಣಸ್ವಾಮಿ
ಕೃಷ್ಣಬೈರೇಗೌಡ 

Quote - 1993ರಿಂದ 1997ರವರೆಗೆ ನಾನು ಸಿ.ಬೈರೇಗೌಡರ ಅನುಯಾಯಿ ಆಗಿದ್ದವನು. ಹಲವಾರು ವಿಚಾರಗಳಲ್ಲಿ ಅವರು ‌ಸಹಾಯ ಮಾಡಿದ್ದಾರೆ. ಕೃಷ್ಣಬೈರೇಗೌಡರ ಜೊತೆಯೂ ಸಂಬಂಧ ಚೆನ್ನಾಗಿದೆ ಎಸ್‌.ಎನ್‌.ನಾರಾಯಣಸ್ವಾಮಿ ಶಾಸಕ‌

ಕೃಷ್ಣ ಮೇಲಲ್ಲ; ಕಂದಾಯ ಇಲಾಖೆ ವಿರುದ್ಧ ಕೋಪ

‘ನಾನೆಂದೂ ಕಂದಾಯ ಸಚಿವ ಕೃಷ್ಣಬೈರೇಗೌಡರ ಕುರಿತು ವ್ಯಕ್ತಿಗತವಾಗಿ ಮಾತನಾಡಿಲ್ಲ. ಅವರ ಜಮೀನಿಗೆ ನಾನು ಹೋಗಿಲ್ಲ ನನ್ನ ಜಮೀನಿಗೆ ಅವರು ಬಂದಿಲ್ಲ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ರಾಜೇಂದ್ರ ಕುಮಾರ್‌ ಕಟಾರಿಯಾ ಅವರು ಜನಸಾಮಾನ್ಯರಿಗೆ ಅಧಿಕಾರಿಗಳಿಗೆ ಕಿರುಕುಳ ನೀಡಿ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಜನಸಾಮಾನ್ಯರ ಹಿತಾಸಕ್ತಿಗಾಗಿ ಏರುಧ್ವನಿಯಲ್ಲಿ ಮಾತನಾಡಿದ್ದೆ. ನಾನು ಸಚಿವರ ವಿರುದ್ಧ ಸಹಿ ಸಂಗ್ರಹ ಆರೋಪ ಮಾಡಿಲ್ಲ. ಬದಲಾಗಿ ಕಟಾರಿಯಾ ಅವರನ್ನು ವರ್ಗಾವಣೆ ಮಾಡಿ ಎಂದು ಶಾಸಕರ ಸಹಿ ಸಂಗ್ರಹ ಮಾಡಿದ್ದೆ. ಏಕೆಂದರೆ ಹುಳಿ ಹಿಂಡಿ ಇಲಾಖೆ ಹಾಳು ಮಾಡಿದ್ದು ಪ್ರಧಾನ ಕಾರ್ಯದರ್ಶಿ ಕಟಾರಿಯಾ. ಎಸ್‌.ಎನ್‌.ನಾರಾಯಣಸ್ವಾಮಿ ಬಂಗಾರಪೇಟೆ ಕಾಂಗ್ರೆಸ್‌ ಶಾಸಕ

ತಹಶೀಲ್ದಾರ್‌ಗೆ ಪತ್ರ ಬರೆದಿಲ್ಲ: ಶಾಸಕ

ನಾನು ಯಾವುದೇ ಪತ್ರವನ್ನು ತಹಶೀಲ್ದಾರ್‌ಗೆ ಕೊಟ್ಟಿಲ್ಲ. ನನಗೆ ಮಾಹಿತಿ ಬೇಕು ಎಂದಿದ್ದರೆ ಫಾರಂ–ಬಿ ಸಾಕಿತ್ತು. ಗ್ರಾಮ ಲೆಕ್ಕಾಧಿಕಾರಿಗೆ ನೀಡಿ ಗೋಮಾಳ ಖರಾಬ್‌ ಕೆರೆ ಎಷ್ಟು ಎಂಬ ಮಾಹಿತಿ ಪಡೆಯಬಹುದು. ತಹಶೀಲ್ದಾರ್‌ಗೆ ಪತ್ರ ಬರೆದು ಮಾಹಿತಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. ನನ್ನ ಕ್ಷೇತ್ರ ಬಂಗಾರಪೇಟೆಯ ವ್ಯಾಪ್ತಿಯ ಹುತ್ತೂರು ಕೂಡ ಕೋಲಾರ ತಾಲ್ಲೂಕಿನಲ್ಲಿದೆ. ಹೀಗಾಗಿ ತಹಶೀಲ್ದಾರ್‌ಗೆ ನನಗೂ ಸಂಬಂಧಪಡುತ್ತಾರೆ. ವಿವಿಧ ವಿಚಾರಗಳಿಗೆ ಪತ್ರ ವ್ಯವಹಾರ ಇರುತ್ತದೆ. ಆಗ ಲೆಟರ್‌ ಹೆಡ್‌ ದುರುಪಯೋಗ ಆಗಿರಬಹುದು. ಆದರೆ ಕೃಷ್ಣಬೈರೇಗೌಡರಿಗೆ ಸಂಬಂಧಿಸಿದ ಮಾಹಿತಿ ಕೋರಿ ನಾನು ಯಾವುದೇ ಪತ್ರ ಬರೆದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.