ADVERTISEMENT

ಕೋಚ್‌ ಕಾರ್ಖಾನೆಗೆ ಶಾಸಕರ ವಿರೋಧವಿತ್ತು

ರಿಯಲ್ ಎಸ್ಟೇಟ್‌ ದಂಧೆಯ ಸಂಚು: ಸಂಸದ ಮುನಿಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:15 IST
Last Updated 2 ಜೂನ್ 2020, 16:15 IST

ಕೋಲಾರ: ‘ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ರೈಲ್ವೆ ಕೋಚ್ ಕಾರ್ಖಾನೆ ಹೆಸರಿನಲ್ಲಿ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆಸಲು ಮುಂದಾಗಿದ್ದ ರಿಯಲ್ ಎಸ್ಟೇಟ್‌ ರಾಜಕಾರಣಕ್ಕೆ ಸ್ಥಳೀಯ ಶಾಸಕ ರಮೇಶ್‌ಕುಮಾರ್‌ರ ವಿರೋಧವಿತ್ತು’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲೋಕಸಭೆ ಚುನಾವಣೆ ಕಾರಣಕ್ಕೆ ಮುನಿಯಪ್ಪ ತರಾತುರಿಯಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಶ್ರೀನಿವಾಸಪುರಕ್ಕೆ ಕೋರ್ಚ್‌ ಕಾರ್ಖಾನೆ ಘೋಷಣೆ ಮಾಡಿಸಿ ಶಂಕುಸ್ಥಾಪನೆ ನೆರವೇರಿಸಿದ್ದರು’ ಎಂದು ಆರೋಪಿಸಿದರು.

‘ಕೋಚ್ ಕಾರ್ಖಾನೆಗೆ ಶ್ರೀನಿವಾಸಪುರದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ಜತೆಗೆ ಹೆಚ್ಚುವರಿಯಾಗಿ 500 ಎಕರೆ ಖಾಸಗಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಕೋಚ್‌ ಕಾರ್ಖಾನೆಯ ಯೋಜನೆ ನೆಪದಲ್ಲಿ ಮಾಜಿ ಸಂಸದರು ರಿಯಲ್ ಎಸ್ಟೇಟ್ ದಂಧೆ ನಡೆಸಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಜನರ ವಿರೋಧವಿತ್ತು’ ಎಂದು ತಿಳಿಸಿದರು.

ADVERTISEMENT

‘ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ ನೇತೃತ್ವದ ಈಗಿನ ಕೇಂದ್ರ ಸರ್ಕಾರ ಕೋಚ್ ಕಾರ್ಖಾನೆ ಬದಲಿಗೆ ರೈಲ್ವೆ ವರ್ಕ್‌ಶಾಪ್‌ ನಿರ್ಮಿಸಲು ಮುಂದಾಗಿದೆ. ಸದ್ಯ ಶ್ರೀನಿವಾಸಪುರದಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಕೋಚ್‌ ಕಾರ್ಖಾನೆಗೆ ಸಾಕಾಗುತ್ತದೆ. ಇದಕ್ಕೆ ಖಾಸಗಿಯವರ ಜಮೀನು ಸ್ವಾಧೀನ ಅಗತ್ಯವಿಲ್ಲ’ ಎಂದು ವಿವರಿಸಿದರು.

‘ರೈಲ್ವೆ ವರ್ಕ್‌ಶಾಪ್‌ಗೆ ಕೇಂದ್ರವು ಈಗಾಗಲೇ ಅನುದಾನ ಮೀಸಲಿಟ್ಟಿದ್ದು, 2023ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ರೈಲ್ವೆ ವರ್ಕ್‌ಶಾಪ್‌ ಕಾರ್ಯಾರಂಭ ಮಾಡಿದರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಕ್ಕಿ, ನಿರುದ್ಯೋಗ ನಿವಾರಣೆಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನದಿ ಜೋಡಣೆ: ‘ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಪಕ್ಕದ ರಾಜ್ಯದ ಕೃಷ್ಣಾ– ಗೋದಾವರಿ ನದಿ ಜೋಡಣೆಗೆ ಕೇಂದ್ರ ಜಲಸಂಪನ್ಮೂಲ ಸಚಿವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಕೆಜಿಎಫ್‌ನ ಬಿಜಿಎಂಎಲ್ ಹಲವು ವರ್ಷಗಳಿಂದ ಮುಚ್ಚಿದೆ’ ಎಂದರು.

‘ಕೆಜಿಎಫ್‌ನಲ್ಲಿ ಗಣಿ ಪುನರಾರಂಭಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರದ ತಜ್ಞರ ತಂಡವು ಗಣಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಬಿಜಿಎಂಎಲ್ ಪುನರಾರಂಭವಾಗಲಿದೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.