ADVERTISEMENT

‘ಕಾರ್ಮಿಕರ ಹೋರಾಟ ಹಾದಿ ತಪ್ಪಿತು‘

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಶ್ರೀರಾಮರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:22 IST
Last Updated 18 ಡಿಸೆಂಬರ್ 2020, 16:22 IST

ಕೋಲಾರ: ‘ವಿಸ್ಟ್ರಾನ್‌ ಕಂಪನಿಯಲ್ಲಿ ಕಾರ್ಮಿಕರು ನಡೆಸಿದ ಹೋರಾಟ ಹಾದಿ ತಪ್ಪಿತು. ಆದರೆ, ಅವರು ತಮ್ಮ ಹಕ್ಕು ಪಡೆದುಕೊಳ್ಳಲು ಹೋರಾಟ ಮಾಡಿದ್ದಾರೆ ಎಂಬ ಅಂಶ ಪರಿಗಣಿಸಬೇಕು’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವೆಸ್ಟ್ರಾನ್‌ ಕಂಪನಿಯಲ್ಲಿನ ದಾಂದಲೆ ಸಂಬಂಧ ಎಲ್ಲರೂ ಒಂದೇ ದೃಷ್ಟಿಕೋನದಲ್ಲಿ ಹೇಳಿಕೆ ನೀಡುವುದು ತಪ್ಪು. ಈ ಘಟನೆ ಯಾರೂ ಒಪ್ಪಲು ಸಾಧ್ಯವಿಲ್ಲವೆಂಬ ಮೂಲ ಕಾರಣವಿಟ್ಟುಕೊಂಡು ಸಂಸದ ಮುನಿಸ್ವಾಮಿ ಅವರು ಮಾತನಾಡಬೇಕಿತ್ತು’ ಎಂದರು.

‘ಪ್ರಕರಣದಲ್ಲಿ ಎಸ್‌ಎಫ್‌ಐ ಪಾತ್ರವಿದೆ ಎಂದು ಸಂಸದರು ಆರೋಪಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ವಾಸ್ತವಾಂಶ ತಿಳಿದು ಮಾತನಾಡಬೇಕು. ವಿನಾಕಾರಣ ಎಸ್‌ಎಫ್‌ಐ ಮೇಲೆ ಆರೋಪ ಮಾಡಬಾರದು. ಹೋರಾಟವೇ ಎಸ್ಎಫ್‌ಐ ಸಂಘಟನೆಯ ಜೀವಾಳ’ ಎಂದು ತಿಳಿಸಿದರು.

ADVERTISEMENT

‘ಕಂಪನಿಯ 7 ಸಾವಿರ ಕಾರ್ಮಿಕರ ಮೇಲೆ ಪ್ರಕರಣ ದಾಖಲಾಗಿದೆ. ಕಂಪನಿಯಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹುರಾಷ್ಟ್ರಿಯ ಕಂಪನಿಗಳ ಸ್ವೇಚ್ಛಾಚಾರ ಪ್ರಶ್ನಿಸುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕ ಸಂಖ್ಯೆ ಹೆಚ್ಚಿದ್ದು, ಕಾನೂನು ಗಾಳಿಗೆ ತೂರಲಾಗಿದೆ. ಕೋಟಿಗಟ್ಟಲೇ ಬಂಡವಾಳ ಹೂಡಿರುವ ಕಂಪನಿಯು ಬಂದ ಲಾಭದಲ್ಲಿ ಕಾರ್ಮಿಕರ ವೇತನ ಹೆಚ್ಚಳ ಮಾಡಿಲ್ಲ. ಕಾರ್ಮಿಕರು ವೇತನವಿಲ್ಲದೆ ಎಷ್ಟು ದಿನ ತಾಳ್ಮೆಯಿಂದ ಇರುತ್ತಾರೆ?’ ಎಂದು ಪ್ರಶ್ನಿಸಿದರು.

ಮೂಲ ಕಾರಣ: ‘ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ತಪ್ಪು. ಕಾನೂನು ಪ್ರಕಾರ 8 ತಾಸು ಮಾತ್ರ ಕೆಲಸ ಮಾಡಿಸಬೇಕು. ಆದರೆ, ವಿಸ್ಟ್ರಾನ್‌ ಕಂಪನಿಯಲ್ಲಿ 12 ತಾಸು ಕೆಲಸ ಮಾಡಿಸಿದ್ದಾರೆ. ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡ ರೀತಿಯೇ ಘಟನೆಗೆ ಮೂಲ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಹೋರಾಟ ಮಾಡುವುದು ಸಂವಿಧಾನಾತ್ಮಕ ಹಕ್ಕು. ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆದ 24 ತಾಸಿನೊಳಗೆ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು. ಕಾರ್ಮಿಕರ ಬಾಕಿ ವೇತನ ನೀಡಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.