ADVERTISEMENT

ಮಕ್ಕಳ ಕಲಿಕೆಗೆ ಪ್ರೇರಣೆ ನೀಡಿ

ಪೋಷಕರಿಗೆ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಪ್ರದೀಪ್‌ಕುಮಾರ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 13:54 IST
Last Updated 22 ಫೆಬ್ರುವರಿ 2021, 13:54 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ಶಾಲಾಭಿವೃದ್ಧಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಉದ್ಘಾಟಿಸಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ಶಾಲಾಭಿವೃದ್ಧಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಉದ್ಘಾಟಿಸಿದರು.   

ಕೋಲಾರ: ‘ಮಕ್ಕಳಿಗೆ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಜೀತಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ಸಂಕೋಲೆ ಹಾಕಿ ಜೀವನ ಹಾಳು ಮಾಡಬೇಡಿ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಪೋಷಕರಿಗೆ ಕಿವಿಮಾತು ಹೇಳಿದರು.

ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ಶಾಲಾಭಿವೃದ್ಧಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಪೋಷಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಜತೆಗೆ ಮಕ್ಕಳ ಕಲಿಕೆಗೆ ಪ್ರೇರಣೆ ನೀಡಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್ ಸಂಕಷ್ಟದಲ್ಲಿ ಸಾಕಷ್ಟು ಮಕ್ಕಳು ದುಡಿಮೆಯತ್ತ ಮುಖ ಮಾಡಿದ್ದಾರೆ. ಅವರು ಇಂದಿಗೂ ಶಾಲೆಯ ಕಲಿಕಾ ಮುಖ್ಯವಾಹಿನಿಗೆ ಬರಲಾಗಿಲ್ಲ. ಈ ಮಕ್ಕಳನ್ನು ಶಾಲೆಗೆ ಕರೆತರಲು ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರ ಸಹಕಾರ ಅಗತ್ಯ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಪ್ರೌಢ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದೆ. ಸೋಮವಾರದಿಂದ 6 ಮತ್ತು 7ನೇ ತರಗತಿ ಆರಂಭಗೊಂಡಿವೆ. ಆದರೂ ಮಕ್ಕಳ ಹಾಜರಾತಿ ಶೇ 100 ತಲುಪಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಪೋಷಕರನ್ನು ಸಂಪರ್ಕಿಸುತ್ತಿದ್ದಾರೆ. ಶಿಕ್ಷಕರ ಜತೆ ಎಸ್‌ಡಿಎಂಸಿ ಸದಸ್ಯರು ಕೈಜೋಡಿಸಿದರೆ ಮಕ್ಕಳನ್ನು ದುಡಿಮೆಯಿಂದ ದೂರ ಮಾಡಿ ಶಾಲೆಗೆ ಬರುವಂತೆ ಮಾಡುವುದು ಸುಲಭ’ ಎಂದರು.

‘ಎಸ್‌ಡಿಎಂಸಿ ಸದಸ್ಯರು ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮಕ್ಕಳ ಸಮಸ್ಯೆಗಳಿದ್ದರೆ ನೇರ ಶಾಲೆಗೆ ಬಂದು ಪರಿಹಾರಕ್ಕೆ ಮುನ್ನುಡಿ ಬರೆಯಬೇಕು. ಶಾಲೆ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಸದಸ್ಯರ ಪಾತ್ರ ನಿರ್ಣಾಯಕ’ ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಸೌಲಭ್ಯ: ‘ಮಕ್ಕಳಿಗೆ ಶಾಲೆಗಳಲ್ಲಿ ಸಮವಸ್ತ್ರ, ಪುಸ್ತಕ, ವಿದ್ಯಾರ್ಥಿವೇತನ, ಬಿಸಿಯೂಟ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ವಿಕಾಸ ಕಾರ್ಯಕ್ರಮದಡಿ ಅವರ ಆರೋಗ್ಯ ಸುರಕ್ಷತೆಗೂ ಒತ್ತು ನೀಡಲಾಗಿದ್ದು, ಉಚಿತ ಚಿಕಿತ್ಸೆ ಸಿಗುತ್ತದೆ’ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ವಿವರಿಸಿದರು.

‘ಶಾಲೆಗಳ ಅಭಿವೃದ್ದಿಗೆ ನರೇಗಾ ಅಡಿ ಗ್ರಾಮ ಪಂಚಾಯಿತಿಗಳಿಂದ ನೆರವು ಪಡೆಯಬೇಕು. ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಸಮಸ್ಯೆಗಳಿದ್ದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಮಕ್ಕಳ ಸುರಕ್ಷತೆಗೆ ಶಾಲೆಯಷ್ಟೇ ಪೋಷಕರು ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಶಾಲೆ ಮುಖ್ಯ ಶಿಕ್ಷಕಿ ಸುಮಾ, ಪ್ರೌಢ ಶಾಲಾ ಎಸ್‌ಡಿಎಂಸಿ ಸದಸ್ಯೆ ಪಾರ್ವತಿ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಇ.ಮುನಿಯಪ್ಪ, ಉಪಾಧ್ಯಕ್ಷೆ ಶರಣ್ಯ, ಸದಸ್ಯರಾದ ರಾಜಲಕ್ಷ್ಮಿ, ಮುನಿಲಕ್ಷ್ಮಮ್ಮ, ಕಲಾವತಿ, ಶಿಕ್ಷಕರಾದ ಭವಾನಿ, ಭಾರತಿ, ಭಾರತಿ, ವೆಂಕಟರಮಣಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.