ADVERTISEMENT

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಕೋರ್ಟ್‌ ಹೇಳಿದೆಯೇ? ಕೊತ್ತೂರು ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:01 IST
Last Updated 25 ಸೆಪ್ಟೆಂಬರ್ 2024, 14:01 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಕೋಲಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಯಾರೂ ಎಲ್ಲೂ ಹೇಳಿಲ್ಲ. ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧ’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಲೂ ಹೇಳುತ್ತೇನೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಇದಕ್ಕೆಲ್ಲ ನಮ್ಮ ಅಸಮಾಧಾನವಿದೆ. ಸಿದ್ದರಾಮಯ್ಯ ಅವರ ಕಾನೂನು ಹೋರಾಟಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ’ ಎಂದರು.

‘ರಾಜೀನಾಮೆ ನೀಡಬೇಕು ಎಂದು ವಿರೋಧಿಗಳು ಕೇಳುವುದು ಸಹಜ. ಆದರೆ ನಮ್ಮ ಪಕ್ಷದಲ್ಲಿ ರಾಹುಲ್‌ ಗಾಂಧಿ, ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆ ಇದ್ದು, ಚರ್ಚಿಸಿ ಕ್ರಮ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕಾದಂಥ ತಪ್ಪು ಮಾಡಿಲ್ಲ’ ಎಂದು ತಿಳಿಸಿದರು.

ADVERTISEMENT

‘ರಾಜೀನಾಮೆ ಕೊಡಬೇಕು ಎಂದು ಕಾನೂನಲ್ಲಿ ಇದೆಯೇ? ಕೋರ್ಟ್ ಆದೇಶ ಮಾಡಿದಿಯೇ? ಹೋರಾಟ ಮಾಡುವುದೇ ವಿರೋಧ ಪಕ್ಷದವರ ಕೆಲಸ. ಈಗ ಒಂದು ಪೀಠದಲ್ಲಿ ಆದೇಶ ಆಗಿದೆ. ಮೇಲ್ಮನವಿ ಹೋಗಲು ಅವಕಾಶ ಇದ್ದು, ಕಾನೂನು ಹೋರಾಟ ನಡೆಸುತ್ತಾರೆ’ ಎಂದರು.

‘ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಆಪಾದನೆ ಬಂದಿತ್ತು. ತನಿಖೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಸಿದ್ದರಾಯ್ಯ ಅವರು ತಪ್ಪು ಮಾಡಿಲ್ಲ ಎಂಬ ನಂಬಿಕೆಯಿದ್ದು, ಅವರೊಟ್ಟಿಗೆ ರಾಜ್ಯದ ಜನತೆಯಿದ್ದು ಮುಂದಿನ ಹಂತದಲ್ಲಿ ಜಯ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅವರ ಪರ, ಇವರ ಪರ ಬೆಂಬಲದ ಪ್ರಶ್ನೆಯಿಲ್ಲ, ಕಾನೂನು ಹೋರಾಟದ ಪರ ನಮ್ಮ ಬೆಂಬಲ, ನಾವು ಎಂದಿಗೂ ಸಿದ್ದರಾಮಯ್ಯ ಪರವಾಗಿಯೇ ಇರುತ್ತೇವೆ. ಅಭಿಮಾನದ ಪ್ರಶ್ನೆ ಇಲ್ಲ ಬರುವುದಿಲ್ಲ, ಈ ಆದೇಶದಿಂದ ನಮಗೆ ಹಿನ್ನಡೆಯಾಗಿಲ್ಲ, ಅದು ಮುನ್ನಡೆ. ಇದರಿಂದಾಗಿ ನಮಗೂ ಬುದ್ಧಿ ಬಂದಿದ್ದು, ಇನ್ನು ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಅರಿವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.