ಮುಳಬಾಗಿಲು: ದರಖಾಸ್ತು ಯೋಜನೆಯಡಿ ಕೃಷಿ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದವರ ಫಲಾನುಭವಿಗಳು ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಶಾಸಕ ಸಮೃದ್ಧಿ ಮಂಜುನಾಥ್, ತಹಶೀಲ್ದಾರ್ ವಿ. ಗೀತಾ ಮತ್ತು ದರಖಾಸ್ತು ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಶನಿವಾರ ಖುದ್ದಾಗಿ ಭೇಟಿ ನೀಡಿದರು.
ರಾಮೇನಲ್ಲೂರು, ಮಜರಾ ಅತ್ತಿಕುಂಟೆ, ರಾಮರಾಯನಕೋಟೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜಮೀನು ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಈ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಈ ಹಿಂದಿನ ಅವಧಿಯಲ್ಲಿನ ಸಾಗುವಳಿ ಚೀಟಿಗಳ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದು, ಬಲಾಢ್ಯರು ಲಜಮೀನುಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಇದೀಗ ಜಮೀನುರಹಿತ ಬಡ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ನಿಯಮ ಪ್ರಕಾರ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದರು.
ತಾಲ್ಲೂಕಿನ 160 ಅರ್ಹ ಫಲಾನುಭವಿಗಳಿಗೆ ಒಂದು ತಿಂಗಳಿನಲ್ಲಿ ಸಾಗುವಳಿ ಚೀಟಿ ವಿತರಿಸಲಾಗುವುದು. ಈ ವಿಷಯದಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ದರಖಾಸ್ತು ಸಮಿತಿ ಸದಸ್ಯ ಗುಜ್ಜನಹಳ್ಳಿ ಮಂಜುನಾಥ್ ಹಾಗೂ ಜಮ್ಮನಹಳ್ಳಿ ಕೃಷ್ಣಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಜಮೀನು ಇಲ್ಲದ ಬಡ ರೈತರನ್ನು ಗುರುತಿಸಲು ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿದ್ದೇವೆ. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದರು.
ತಹಶೀಲ್ದಾರ್ ವಿ. ಗೀತಾ. ದರಖಾಸ್ತು ಸಮಿತಿ ಸದಸ್ಯರಾದ ನೀಲಾವತಿ, ಜಮ್ಮನಹಳ್ಳಿ ಕೃಷ್ಣಪ್ಪ, ಗುಜ್ಜನಹಳ್ಳಿ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಲಕ್ಷ್ಮಿನಾರಾಯಣ್, ಉಪ ತಹಶೀಲ್ದಾರ್ ಸುಬ್ರಮಣಿ, ಗ್ರಾಮ ಲೆಕ್ಕಾಧಿಕಾರಿ ಕಾವ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.