ADVERTISEMENT

ಅಂತರರಾಜ್ಯ ಗಡಿ ಅಪರಾಧ ಸಭೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:18 IST
Last Updated 12 ಅಕ್ಟೋಬರ್ 2025, 5:18 IST
ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆ ಆವರಣದಲ್ಲಿ ಕೋಲಾರ, ಕೆಜಿಎಫ್ ಹಾಗೂ ನೆರೆಯ ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳ ಅಂತರರಾಜ್ಯ ಅಪರಾಧಗಳ ಸಭೆ ನಡೆಯಿತು
ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆ ಆವರಣದಲ್ಲಿ ಕೋಲಾರ, ಕೆಜಿಎಫ್ ಹಾಗೂ ನೆರೆಯ ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳ ಅಂತರರಾಜ್ಯ ಅಪರಾಧಗಳ ಸಭೆ ನಡೆಯಿತು   

ಮುಳಬಾಗಿಲು: ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಕೋಲಾರ, ಕೆಜಿಎಫ್ ಜಿಲ್ಲಾ ಪೊಲೀಸ್ ಮತ್ತು ನೆರೆಯ ಆಂಧ್ರಪ್ರದೇಶದ ಪಲಮನೇರು ಹಾಗೂ ಚಿತ್ತೂರು ಪೊಲೀಸ್ ಇಲಾಖೆ ಅಧಿಕಾರಿಗಳು ಗಡಿ ಅಪರಾಧ ಸಭೆ ನಡೆಸಿದರು.

ರಾಜ್ಯದ ಗಡಿಯ ಪೊಲೀಸ್ ಠಾಣೆಗಳಲ್ಲಿ ಗಡಿಗಳಿಗೆ ಹೊಂದಿಕೊಂಡಂತೆ ಇರುವ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಗಡಿಗಳ ಸಭೆ ನಡೆಸುವುದು ಸಂಪ್ರದಾಯ. ಆದರೆ, ಇತ್ತೀಚಿಗೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೂರು ತಿಂಗಳಿನಲ್ಲಿ ಮಾಡಬೇಕಾದ ಸಭೆಯನ್ನು ಈಗ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಭೆಯಲ್ಲಿ ಕೋಲಾರ, ಕೆಜಿಎಫ್ ಜಿಲ್ಲಾ ಡಿವೈಎಸ್‌ಪಿಗಳು, ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಹಾಗೂ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಆಂಧ್ರಪ್ರದೇಶದ ಪಲಮನೇರು ಹಾಗೂ ಚಿತ್ತೂರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿ, ಅಂತರರಾಜ್ಯ ಕಳ್ಳರು, ಅಪರಾಧ ಪ್ರಕರಣಗಳು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚೆ ಮಾಡಿದರು. 

ADVERTISEMENT

ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕುಗಳು ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿವೆ ಅದೇ ರೀತಿ ಆಂಧ್ರಪ್ರದೇಶದ ಪಲಮನೇರು ಹಾಗೂ ಚಿತ್ತೂರು ಜಿಲ್ಲೆಗಳು ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿವೆ. ಕೆಲವು ಪ್ರಕರಣಗಳ ಅಪರಾಧಿಗಳ ಪತ್ತೆಗೆ ಎರಡೂ ರಾಜ್ಯಗಳು ಸಮನ್ವಯ ಸಾಧಿಸಲು ಇಂಥ ಸಭೆಗಳನ್ನು ನಡೆಸಲಾಗುತ್ತದೆ ಎಂದು ಕೆಜಿಎಫ್ ಡಿವೈಎಸ್‌ಪಿ ಲಕ್ಷ್ಮಯ್ಯ ತಿಳಿಸಿದರು. 

ಆಂಧ್ರಪ್ರದೇಶದಲ್ಲಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಕರ್ನಾಟಕದವರು ಮತ್ತು ಕರ್ನಾಟಕದಲ್ಲಿನ ಕೆಲವು ಅಪರಾಧ ಪ್ರಕರಣಗಳಲ್ಲಿ ಆಂಧ್ರದವರು ಭಾಗಿಯಾಗಿರುತ್ತಾರೆ. ಇಂಥ ಸಂದರ್ಭಗಳಲ್ಲಿ ತಪ್ಪಿತಸ್ಥರ ಪತ್ತೆ ಕಷ್ಟಸಾಧ್ಯ. ಹೀಗಾಗಿ, ಪರಸ್ಪರ ಎರಡೂ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಪ್ರಕರಣಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದೇ ಉದ್ದೇಶಕ್ಕೆ ಗಡಿ ಅಪರಾಧ ಸಭೆಗಳು ನಡೆಯುತ್ತವೆ ಎಂದು ಮುಳಬಾಗಿಲು ಎಎಸ್ಐ ಮನಿಷಾ ತಿಳಿಸಿದರು. 

ಸಭೆಯಲ್ಲಿ ಕೋಲಾರ, ಕೆಜಿಎಫ್, ಆಂಧ್ರಪ್ರದೇಶದ ಪಲಮನೇರು ಹಾಗೂ ಚಿತ್ತೂರು ಜಿಲ್ಲೆಗಳ ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.