
ಮುಳಬಾಗಿಲು: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ನೇತಾಜಿ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನಡೆಯಿತು.
ಶಾಸಕ ಸಮೃದ್ಧಿ ಮಂಜುನಾಥ್, ತಹಶೀಲ್ದಾರ್ ವಿ.ಗೀತಾ ಹಾಗೂ ಎಎಸ್‌ಪಿ ಮನಿಷಾ ಮೋಹಿನ್ ಅವರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಇತಿಹಾಸ ತಜ್ಞ ಡಾ.ಜಿ.ಶಿವಪ್ಪ ಅರಿವು ಮಾತನಾಡಿ, ಇತಿಹಾಸದ ಪಠ್ಯ ಪುಸ್ತಕಗಳನ್ನು ರಚಿಸಿದವರು ಕೇವಲ ಅವರವರ ಸ್ಥಳೀಯ ಇತಿಹಾಸವನ್ನು ಮಾತ್ರ ನಮೂದಿಸಿ, ದೂರದ ಅನೇಕ ಐತಿಹಾಸಿಕ ಸಂಗತಿಗಳನ್ನು ಬಿಟ್ಟಿದ್ದಾರೆ. ಹಾಗಾಗಿ ಮುಳಬಾಗಿಲು ತಾಲ್ಲೂಕಿನ ಅನೇಕ ಐತಿಹಾಸಿಕ ಸಂಗತಿಗಳು ಮರೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
‘ಕೆಲವರು ತಾವೇ ದೊಡ್ಡವರು ಎಂದು ಕರೆದುಕೊಂಡಿರುವವರಿಂದ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದೆ. ಹಾಗಾಗಿ ಜಾತಿ ಎಂಬ ಭೂತ ನಿವಾರಣೆಯಾಗಲು ಅರಿವು ಭಾರತ್ 12 ವರ್ಷಗಳಿಂದ ಚಳವಳಿ ನಡೆಸುತ್ತಿದೆ’ ಎಂದು ಹೇಳಿದರು.
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ತಾಲ್ಲೂಕು ಪ್ರವಾಸಿಗರ ಸ್ಥಳವಾಗಿದ್ದು, ಅನೇಕ ದೇವಾಲಯಗಳು ಹಾಗೂ ಐತಿಹಾಸಿಕ ಸ್ಥಳಗಳಿವೆ. ಹಾಗಾಗಿ ಎಲ್ಲವನ್ನೂ ಡಾಕ್ಯುಮೆಂಟರಿ ಮಾಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಳುಹಿಸಿ ತಾಲ್ಲೂಕಿನ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನಂತರ ನಗರದ ಅನೇಕ ಶಾಲಾ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ತಾಲ್ಲೂಕಿನಲ್ಲಿ ಅತಿಹೆಚ್ಚು ರಾಗಿ ಬೆಳೆದ ಹತ್ತು ಮಂದಿ ರೈತರನ್ನು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರಪ್ಪ, ರಘುಪತಿ ರೆಡ್ಡಿ, ನಗವಾರ ಎನ್.ಆರ್.ಸತ್ಯಣ್ಣ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.