ADVERTISEMENT

ಕೋಲಾರ| ನಗರಸಭೆ ಚುನಾವಣೆ ಪ್ರಚಾರ ಅಂತ್ಯಗೊಳಿಸಿ: ಜಿಲ್ಲಾಧಿಕಾರಿ ಆದೇಶ

ಆದೇಶ ಉಲ್ಲಂಘಿಸಿದರೆ ಶಿಸ್ತುಕ್ರಮ: ಜಿಲ್ಲಾಧಿಕಾರಿ ಮಂಜುನಾಥ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:07 IST
Last Updated 9 ನವೆಂಬರ್ 2019, 11:07 IST

ಕೋಲಾರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರವನ್ನು ಮತದಾನಕ್ಕೂ 48 ತಾಸು ಮುನ್ನ ಅಂತ್ಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆದೇಶಿಸಿದ್ದಾರೆ.

ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಭಾನುವಾರ (ನ.10) ಬೆಳಿಗ್ಗೆ ಪ್ರಚಾರ ಅಂತ್ಯಗೊಳಿಸಬೇಕು. ನಂತರ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಸಾರ್ವಜನಿಕ ಸಭೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಮತದಾರರಿಗೆ ಮೊಬೈಲ್ ಮೂಲಕ ಎಸ್‌ಎಂಎಸ್ ಕಳುಹಿಸುವಂತಿಲ್ಲ. ರೇಡಿಯೊ, ಟಿ.ವಿ, ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ವಿಡಿಯೋ ತುಣುಕು ಪ್ರದರ್ಶಿಸುವಂತಿಲ್ಲ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಚುನಾವಣಾ ಪ್ರಚಾರ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆದೇಶ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಹಾಗೂ ಪ್ರಚಾರ ಕಾರ್ಯ ನಿರ್ವಹಿಸುವವರು ಭಾನುವಾರ ಬೆಳಿಗ್ಗೆ 7 ಗಂಟೆ ನಂತರ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ವಾರ್ಡ್‌ ವ್ಯಾಪ್ತಿಯಿಂದ ಹೊರ ಹೋಗಬೇಕು. ವಾರ್ಡ್‌ಗಳ ವ್ಯಾಪ್ತಿಯಲ್ಲಿ ವಾಸ್ತವ್ಯ ಮುಂದುವರಿಸಿದರೆ ಮುಕ್ತ ಚುನಾವಣೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ನ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳ ಹಾಗೂ ಜನರ ಓಡಾಟದ ಮೇಲೆ ನಿಗಾ ವಹಿಸಲಾಗುತ್ತದೆ. ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದರೆ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರಜೆ ಘೋಷಣೆ: ಜಿಲ್ಲೆಯ 3 ನಗರಸಭೆಗಳಿಗೆ ಮತದಾನ ನಡೆಯುವ ನ.12ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆಗೆ ನ.12ರಂದು ಚುನಾವಣೆ ನಿಗದಿಯಾಗಿದೆ. ಆ ದಿನ ಮತದಾರರಿಗೆ ಮತದಾನ ಮಾಡಲು ಅವಕಾಶವಾಗುವಂತೆ ರಜೆ ನೀಡಲಾಗಿದೆ.

ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು), ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರಜೆಯ ಆದೇಶ ಅನ್ವಯವಾಗುತ್ತದೆ. ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಉದ್ದಿಮೆ, ವ್ಯವಹಾರಿಕ ಸಂಸ್ಥೆ, ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನಸಹಿತ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಹಾಗೂ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.