ADVERTISEMENT

ಕೆಜಿಎಫ್‌ | 'ಪೌರಕಾರ್ಮಿಕರಿಗೆ ಶೀಘ್ರವೇ ಗೃಹ ಭಾಗ್ಯ'

ರಾಬರ್ಟ್‌ಸನ್‌ಪೇಟೆಯಲ್ಲಿ ಪೌರಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:17 IST
Last Updated 24 ಸೆಪ್ಟೆಂಬರ್ 2025, 7:17 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಮಂಗಳವಾರ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಲಾಯಿತು. ಶಾಸಕಿ ಎಂ.ರೂಪಕಲಾ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ಇದ್ದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಮಂಗಳವಾರ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಲಾಯಿತು. ಶಾಸಕಿ ಎಂ.ರೂಪಕಲಾ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ಇದ್ದರು   

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆ ನಗರಸಭೆಯಲ್ಲಿ ಮಂಗಳವಾರ ಪೌರಕಾರ್ಮಿಕರ ದಿನ ಆಚರಿಸಲಾಯಿತು. 

ಶಾಸಕಿ ಎಂ. ರೂಪಕಲಾ ಶಶಿಧರ್ ಮಾತನಾಡಿ, ‘ಪೌರ ಕಾರ್ಮಿಕರಿಗೆ ಸೂರಪಲ್ಲಿ ಬಳಿ 95 ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರ ಮಾಡಲಾಗಿದೆ. ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುವುದು’ ಎಂದರು. 

ಎಲ್ಲರೂ ಏಳುವ ಮೊದಲೇ ತಾವು ಎದ್ದು ಊರನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಎಲ್ಲ ರೀತಿಯ ಗೌರವ ನೀಡಬೇಕು. ರಾಬರ್ಟ್‌ಸನ್‌ಪೇಟೆ ನಗರಸಭೆಗೆ 119 ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಈ ಪೈಕಿ ಪೈಕಿ 95 ಜನರಿಗೆ ಮೊದಲ ಹಂತದಲ್ಲಿ ಮನೆ ನೀಡಲಾಗಿದೆ. ಉಳಿದ ಕಾರ್ಮಿಕರಿಗೂ ಗೃಹಭಾಗ್ಯ ಯೋಜನೆಯಡಿ ಮನೆ ಕಟ್ಟಿ ಕೊಡಲಾಗುವುದು ಎಂದರು.

ADVERTISEMENT

ಪೌರ ಕಾರ್ಮಿಕರು ಕೇವಲ ಕಸ ಗುಡಿಸಲು ಸೀಮಿತವಲ್ಲ. ಅವರಲ್ಲಿ ಇರುವ ಪ್ರತಿಭೆಗಳನ್ನು ಮತ್ತು ನಿಷ್ಠೆಯಿಂದ ಕೆಲಸ ಮಾಡುವವರನ್ನೂ ಗುರುತಿಸಿ, ಪ್ರೋತ್ಸಾಹಿಸಬೇಕು. ಕಾಯಂ ಇಲ್ಲದೆ ಕೆಲಸ ಮಾಡಿ ನಿವೃತ್ತಿಯಾದವರಿಗೆ ಸುತ್ತುನಿಧಿಯಲ್ಲಿ ₹7 ಲಕ್ಷ ನೀಡಲಾಗುತ್ತಿದೆ. ಇವೆಲ್ಲವೂ ಎಷ್ಟೋ ವರ್ಷದ ಹೋರಾಟದ ಫಲ ಎಂದು ತಿಳಿಸಿದರು.

ನಗರದ ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆಯುವಂತೆ ಮಾಡಲು ಎಲ್ಲ ಪೌರಕಾರ್ಮಿಕರು ಸಹಕಾರ ನೀಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಹೇಳಿದರು.

ಪೌರ ಕಾರ್ಮಿಕ ಸಂಘದ ಒತ್ತಾಯದ ಮೇರೆಗೆ ಪೌರ ಕಾರ್ಮಿಕರ ದಿನಾಚರಣೆಯನ್ನು 2012ರಿಂದ ಮಾಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ಪ್ರತಿದಿನ ಬೆಳಗಿನ ಉಪಾಹಾರ ನೀಡುವುದು ಕೂಡ ಸಂಘದ ಸಂಘಟಿತ ಹೋರಾಟದ ಫಲ ಎಂದು ಪೌರ ಕಾರ್ಮಿಕರ ರಾಜ್ಯ ಘಟಕದ ಅಧ್ಯಕ್ಷ ವೆಂಕಟೇಶಪ್ಪ ತಿಳಿಸಿದರು.

1996ರವರೆಗೆ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳೇ ಸಂಬಳ ನೀಡಬೇಕಿತ್ತು. ಇದರಿಂದಾಗಿ ಪೌರಕಾರ್ಮಿಕರು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸಂಬಳ ಪಡೆಯುವುದು ಕಷ್ಟವಾಗಿತ್ತು. ಪೌರ ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಪೌರಕಾರ್ಮಿಕರಿಗೆ ಸಂಬಳ ನೀಡಲು ಒಪ್ಪಿಗೆ ನೀಡಿತು ಎಂದು ಆಯುಕ್ತ ಆಂಜನೇಯಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.