ADVERTISEMENT

ಮುನಿಯಪ್ಪರ ತಂತ್ರ ನಡೆಯಲ್ಲ

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಲೇವಡಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:52 IST
Last Updated 4 ಮೇ 2019, 1:52 IST

ಕೋಲಾರ: ‘ಸಂಸದ ಕೆ.ಎಚ್.ಮುನಿಯಪ್ಪ ಅವರು ಕ್ಷೇತ್ರದ ಜನರನ್ನು ಯಾಮಾರಿಸಿದ್ದು ಸಾಕು. ಅವರ ತಂತ್ರ ಮಂತ್ರ ಇನ್ನು ನಡೆಯಲ್ಲ. ಜನತಾ ಜನಾರ್ಧನನ ತೀರ್ಪಿನಿಂದ ಕೋಲಾರ ಜಿಲ್ಲೆ ಶಾಪ ಮುಕ್ತವಾಗಲಿದೆ’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಷೇತ್ರದ ಮತದಾರರು ಮುನಿಯಪ್ಪರನ್ನು ಮನೆಗೆ ಕಳುಹಿಸಲು ನಿರ್ಧಾರದೊಂದಿಗೆ ಮತ ಚಲಾಯಿಸಿದ್ದಾರೆ. ಈ ಬಾರಿ ಮುನಿಯಪ್ಪ ಅವರು ಸೋತು ಕ್ಷೇತ್ರದಿಂದ ಗಂಟು ಮೂಟೆ ಕಟ್ಟುವುದು ನಿಶ್ಚಿತ’ ಎಂದು ಲೇವಡಿ ಮಾಡಿದರು.

‘ಮುನಿಯಪ್ಪ ಸತತ 7 ಬಾರಿ ಸಂಸದರಾದರೂ ಕ್ಷೇತ್ರದಲ್ಲಿ ಕನಿಷ್ಠ ಒಂದು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರ ದುರಾಡಳಿತದಿಂದ ಬೇಸತ್ತಿರುವ ಜನ ಸಿಡಿದೆದ್ದಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಶಯದಿಂದ ಜನ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ’ ಎಂದರು.

ADVERTISEMENT

‘ಮೋದಿಯವರ ಸ್ವಚ್ಛ ಆಡಳಿತ ಹಾಗೂ ದೇಶ ಪ್ರೇಮಕ್ಕೆ ಮನಸೋತಿರುವ ಜನ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಣ ನೀಡಿದರೂ ಅದನ್ನು ಪಡೆದು ಬಿಜೆಪಿಗೆ ಮತ ಹಾಕಿದ್ದಾರೆ. ಈಗಾಗಲೇ ನಡೆದಿರುವ ಅನೇಕ ಸಮೀಕ್ಷೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವೆಂಬ ಸಂಗತಿ ಬಹಿರಂಗವಾಗಿದೆ. ಈ ಎಲ್ಲಾ ಸಮೀಕ್ಷೆಗಳನ್ನೂ ಮೀರಿ ಜನ ಮೋದಿಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಮಣ್ಣಿನ ಮಗ: ‘ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಾನು ಈಜಿಲ್ಲೆಯ ಮಣ್ಣಿನ ಮಗನಾಗಿದ್ದು, ಮತದಾರರು ಹಾಕಿರುವ ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕೋಲಾರವನ್ನು ಮಾದರಿ ಕ್ಷೇತ್ರವಾಗಿಸುವ ಸಂಕಲ್ಪ ಮಾಡಿದ್ದೇನೆ. ಪಕ್ಷಾತೀತವಾಗಿ ಎಲ್ಲಾ ಹಾಲಿ, ಮಾಜಿ ಶಾಸಕರ ಹಾಗೂ ವಿವಿಧ ಪಕ್ಷಗಳ ಮುಖಂಡರ ಸಹಕಾರ ಪಡೆದು ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜನತೆ ಈಗಾಗಲೇ ಮತ ನೀಡಿ ಗೆಲುವಿನ ವಿಶ್ವಾಸ ತುಂಬಿದ್ದಾರೆ. ಚುನಾವಣಾ ಫಲಿತಾಂಶದ ಯಾವುದೇ ಆತಂಕವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.