ADVERTISEMENT

ಕೊಲೆ ಯತ್ನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 14:09 IST
Last Updated 7 ಡಿಸೆಂಬರ್ 2021, 14:09 IST

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಕರಿನಾಯಕನಹಳ್ಳಿಯಲ್ಲಿ ನಡೆದಿದ್ದ ಹೋಂಡಾ ಕಂಪನಿ ಉದ್ಯೋಗಿ ಚಮತ್‌ರೆಡ್ಡಿ (23) ಕೊಲೆ ಯತ್ನ ಪ್ರಕರಣ ಸಂಬಂಧ ಪೊಲೀಸರು ಒಡಿಶಾ ಮೂಲದ ಮೂವರು ಯುವಕರನ್ನು ಬಂಧಿಸಿದ್ದಾರೆ.

ಚಮತ್‌ರೆಡ್ಡಿ ಅವರ ಸಹೋದ್ಯೋಗಿಗಳಾದ ಕನ್ನು, ಶಂಕರ್‌ ಮತ್ತು ಸುಬ್ರತ್‌ ಬಂಧಿತರು. ಹೋಂಡಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಚಮತ್‌ರೆಡ್ಡಿ ಜತೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಮಾಲೂರು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿಯ ಚಮತ್‌ರೆಡ್ಡಿ ಸಹೋದ್ಯೋಗಿಗಳೊಂದಿಗೆ ವಾಸವಾಗಿದ್ದ ಕರಿನಾಯಕನಹಳ್ಳಿಯ ಬಾಡಿಗೆ ಮನೆ ಸಮೀಪ ನ.8ರಂದು ಗಾಯಗೊಂಡು ಬಿದ್ದಿದ್ದರು. ಅವರ ತಾಯಿ ನಾಗಮಣಿ, ದುಷ್ಕರ್ಮಿಗಳು ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ನ.9ರಂದು ದೂರು ಕೊಟ್ಟಿದ್ದರು. ಅವರ ದೂರು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಘಟನಾ ದಿನ ವಿಚಾರಣೆ ನಡೆಸಿದಾಗ ಚಮತ್‌ರೆಡ್ಡಿ ತಮ್ಮ ಮೇಲೆ ಯಾರೂ ಹಲ್ಲೆ ನಡೆಸಿಲ್ಲ ಎಂದು ಕೈ ಸನ್ನೆ ಮೂಲಕ ತೋರಿಸಿದ್ದರು. ವೈದ್ಯರು, ಚಮತ್‌ರೆಡ್ಡಿ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಕಡಿಮೆ ಎಂದು ಮೌಖಿಕವಾಗಿ ಹೇಳಿದ್ದರು. ಪೋಷಕರ ಆರೋಪದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಚಮತ್‌ರೆಡ್ಡಿ ಸಹೋದ್ಯೋಗಿಗಳ ವಿಚಾರಣೆ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ ಮತ್ತೊಮ್ಮೆ ಚಮತ್‌ರೆಡ್ಡಿಗೆ 6 ಮಂದಿ ಸಹೋದ್ಯೋಗಿಗಳ ಫೋಟೊ ತೋರಿಸಿದಾಗ ಅವರಲ್ಲಿ 3 ಮಂದಿಯನ್ನು ಗುರುತು ಹಿಡಿದು ಅವರೇ ಹಲ್ಲೆ ನಡೆಸಿದ್ದಾಗಿ ಕೈ ಸನ್ನೆ ಮೂಲಕ ತೋರಿಸಿದರು. ಈ ಸುಳಿವು ಆಧರಿಸಿ ಕನ್ನು, ಶಂಕರ್‌ ಮತ್ತು ಸುಬ್ರತ್‌ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ವಿಳಂಬ: ‘ಪೊಲೀಸರು ಪ್ರಕರಣದ ಆರೋಪಿಗಳನ್ನು ಒಂದು ತಿಂಗಳು ವಿಳಂಬ ಮಾಡಿದ್ದಾರೆ. ಜತೆಗೆ ನಿಷ್ಪಕ್ಷಪಾತ ತನಿಖೆ ನಡೆಸದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ತಹಶೀಲ್ದಾರ್‌ ಸಮ್ಮುಖದಲ್ಲಿ ಚಮತ್‌ರೆಡ್ಡಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಬುಧವಾರ ಮನವಿ ಸಲ್ಲಿಸುತ್ತೇವೆ’ ಎಂದು ಚಮತ್‌ರೆಡ್ಡಿ ಅವರ ಮಾವ ವಿ.ಮುನಿರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.