ADVERTISEMENT

ಪ್ರಥಮ ದರ್ಜೆ ಕಾಲೇಜಿಗೆ ‘ನ್ಯಾಕ್‌’ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 15:13 IST
Last Updated 21 ಮಾರ್ಚ್ 2019, 15:13 IST
ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಭೇಟಿ ನೀಡಿದ ನ್ಯಾಕ್ ಸಮಿತಿ ಸದಸ್ಯರು ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್‌ ಜತೆ ಚರ್ಚೆ ನಡೆಸಿದರು.
ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಭೇಟಿ ನೀಡಿದ ನ್ಯಾಕ್ ಸಮಿತಿ ಸದಸ್ಯರು ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್‌ ಜತೆ ಚರ್ಚೆ ನಡೆಸಿದರು.   

ಕೋಲಾರ: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಸದಸ್ಯರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲೇಜಿನ ವಿವಿಧ ವಿಭಾಗಗಳಿಗೆ ತೆರಳಿದ ಸಮಿತಿ ಸದಸ್ಯರು ಆಯಾ ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದರು. ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು.

‘ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರದ ಜತೆಗೆ ಸಮುದಾಯದ ಸಹಕಾರವೂ ಅಗತ್ಯ’ ಎಂದು ನ್ಯಾಕ್ ಸಮಿತಿ ಸದಸ್ಯೆ ಹಾಗೂ ಸೊಲ್ಲಾಪುರ ವಿಶ್ವವಿದ್ಯಾಲಯದ ಕುಲಪತಿ ಮೃಣಾಲಿನಿ ಪಡ್ನಿಸ್‌ ಅಭಿಪ್ರಾಯಪಟ್ಟರು.

ADVERTISEMENT

‘ಕಾಲೇಜಿನ ವಿಧ್ಯಾರ್ಥಿಗಳು ಎನ್‌ಸಿಸಿ. ಎನ್ಎಸ್ಎಸ್. ರೆಡ್‌ಕ್ರಾಸ್‌, ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ, ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆ ರಚಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂಲಸೌಕರ್ಯಕ್ಕೆ ಪ್ರಸ್ತಾವ: ‘ಕೋಲಾರ ಸುತ್ತಮುತ್ತ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಕೈಗಾರಿಕೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಕಾಲೇಜಿಗೆ ಮೂಲಸೌಕರ್ಯ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಿದ್ದೇವೆ. ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಮೂಲಸೌಕರ್ಯ ಕಲ್ಪಿಸುವುದಾಗಿ ಕೈಗಾರಿಕೆ ಮುಖ್ಯಸ್ಥರು ಭರವಸೆ ನೀಡಿದ್ದಾರೆ’ ಎಂದು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ನಾಗಶೇಖರ್ ವಿವರಿಸಿದರು.

‘ಈ ಕಾಲೇಜು ಜಿಲ್ಲೆಯಲ್ಲಿ ಪ್ರತಿಷ್ಠಿತ ಕಾಲೇಜಾಗಿದೆ. ಇಲ್ಲಿ ವ್ಯಾಸಂಗ ಮಾಡಿ ಹೋಗಿರುವವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರನ್ನು ಸಂಪರ್ಕಿಸಿ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಚಟುವಟಿಕೆ ನಡೆಸುವಂತೆ ಮನವಿ ಮಾಡಿ’ ಎಂದು ಮೃಣಾಲಿನಿ ಫಡ್ನಿಸ್‌ ಸಲಹೆ ನೀಡಿದರು.

ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ನ್ಯಾಕ್‌ ಸಮಿತಿ ಸದಸ್ಯರು ಭೇಟಿ ನೀಡಿದರು. ಕಾಲೇಜು ಆವರಣದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ವೀಕ್ಷಿಸಿದರು. ಸಮಿತಿ ಸದಸ್ಯರಾದ ರಾಮಕೃಷ್ಣ ಬಜಾಜ್, ಜೀತೂ ಬೃಗೊಹೇವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.