ADVERTISEMENT

ಶಾಲೆಯಲ್ಲಿ ನಮಾಜ್‌: ವಿವಾದ ಬೇಡ- ನಗರಸಭೆ ಸದಸ್ಯ ಎನ್.ಅಂಬರೀಶ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 15:01 IST
Last Updated 22 ಜನವರಿ 2022, 15:01 IST

ಕೋಲಾರ: ಮುಳಬಾಗಿಲು ನಗರದ ಬಳೇ ಚೆಂಗಪ್ಪ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ನಮಾಜ್ ಮಾಡಿರುವುದನ್ನು ಕೆಲ ಹಿಂದೂಪರ ಸಂಘಟನೆಗಳು ವಿವಾದ ಮಾಡುತ್ತಿರುವುದು ಖಂಡನೀಯ ಎಂದು ನಗರಸಭೆ ಸದಸ್ಯ ಎನ್.ಅಂಬರೀಶ್‌ ಹೇಳಿದ್ದಾರೆ.

ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಯಾವುದೇ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳು ಸರ್ವ ಧರ್ಮಗಳಿಗೂ ಅನ್ವಯವಾಗುತ್ತವೆ. ಅದರಲ್ಲೂ ಶಾಲಾ ಮಕ್ಕಳಿಗೆ ಧರ್ಮದ ಅರಿವು ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣಪತಿ ಪೂಜೆಯನ್ನು ಎಲ್ಲಾ ಧರ್ಮದವರು ಸೇರಿ ಧರ್ಮದ ಗಡಿ ಮೀರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಸಮಯಪ್ರಜ್ಞೆ ಮೆರೆದ ಬಳೇ ಚೆಂಗಪ್ಪ ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಅವರು ಇತರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಸಮುದಾಯದ ಮಕ್ಕಳು ನಮಾಜ್ ಮಾಡಲು ಹೊರಗೆ ಹೋಗದಂತೆ ಶಾಲೆಯಲ್ಲೇ ಅವಕಾಶ ಕಲ್ಪಿಸಿದ್ದಾರೆ. ಅವರ ನಡೆಯನ್ನು ಪ್ರಶಂಸಿಸಬೇಕು. ಈ ವಿಚಾರವನ್ನು ವಿವಾದ ಮಾಡುವುದು ಮತ್ತು ಮಕ್ಕಳಲ್ಲಿ ಧರ್ಮದ ವಿಷ ಬೀಜ ಬಿತ್ತುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಡಿ.ವಿ.ಗುಂಡಪ್ಪನವರು ಜನಿಸಿದ ನೆಲದಲ್ಲಿ ಶಾಂತಿ ಸದಾ ಕಾಲ ನೆಲೆಸಿರಬೇಕು. ಮಾನವರೆಲ್ಲರೂ ಒಂದೇ, ನಾವೆಲ್ಲರೂ ಮಾನವ ಧರ್ಮ ಎಂಬುದು ಕುವೆಂಪುರವರ ಸ್ಫೂರ್ತಿಯ ಆಶಯ ಮೂಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.