ADVERTISEMENT

ಶಾಲೆಯಲ್ಲಿ ನಮಾಜ್‌: ಮುಖ್ಯ ಶಿಕ್ಷಕಿ ತಲೆದಂಡ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 19:30 IST
Last Updated 26 ಜನವರಿ 2022, 19:30 IST

ಕೋಲಾರ: ಜಿಲ್ಲೆಯ ಮುಳಬಾಗಿಲಿನ ಸೋಮೇಶ್ವರಪಾಳ್ಯದ ಬಳೇ ಚೆಂಗಪ್ಪ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ಎಂ.ಉಮಾದೇವಿ ಅವರನ್ನು ಅಮಾನತು ಮಾಡಲಾಗಿದೆ.

ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ ಮಾಡಲು ಅವಕಾಶ ನೀಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಯು ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಆದೇಶಿಸಿದ್ದರು.

ಬಳಿಕ ಡಿಡಿಪಿಐ ರೇವಣ ಸಿದ್ದಪ್ಪ ಅವರು ಶಾಲೆಗೆ ಭೇಟಿ ಕೊಟ್ಟು ಉಮಾದೇವಿ ಮತ್ತು ಸಹ ಶಿಕ್ಷಕರ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಡಿ.ಗಿರಿಜೇಶ್ವರಿ ದೇವಿ ಅವರು ಉಮಾದೇವಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಶಾಲಾ ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮೂಡಿಸುವುದು ಮತ್ತು ಸಾಧಿಸುವ ಪ್ರವೃತ್ತಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ, ಶಾಲೆಯಲ್ಲಿ ಧರ್ಮ ನಿರಾಪೇಕ್ಷತೆ ನಡವಳಿಕೆ, ಆಚರಣೆ ಮತ್ತು ಪದ್ಧತಿ ಇರಬೇಕು. ಆದರೆ, ಮುಖ್ಯ ಶಿಕ್ಷಕಿಯಾಗಿ ಒಂದು ಧರ್ಮದ ಮಕ್ಕಳಿಗೆ ಶಾಲೆಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಿ ಭಿನ್ನತೆಯ ಭಾವನೆ ಮೂಡಿಸಿರುವುದು ತಪ್ಪು. ಈ ನಡವಳಿಕೆಯು ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪ ತೋರಿಸುತ್ತದೆ ಎಂದು ಬಿಇಒ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಶಾಲೆ ವಾತಾವರಣ ಹದಗೆಡಿಸಿರುವುದು, ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿರುವುದು ಹಾಗೂ ಶಾಲೆಯ ಸರ್ವತ್ತೋಮುಖ ಬೆಳವಣಿಗೆಗೆ ಅಡ್ಡಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮುಖ್ಯ ಶಿಕ್ಷಕಿಯಾಗಿ ಉಮಾದೇವಿ ಅವರು ಸಮಾಜದ ಒಳಿತು ಮತ್ತು ಇಲಾಖೆಯ ಗೌರವ ಕಾಪಾಡುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಈ ನಡವಳಿಕೆ ಸರ್ಕಾರಿ ನೌಕರನಿಗೆ ತಕ್ಕದ್ದಲ್ಲ ಎಂದು ಆದೇಶದಲ್ಲಿ ಹೇಳಿದ್ದಾರೆ.

ಉಮಾದೇವಿ ಅವರ ವಿರುದ್ಧ ಇಲಾಖೆ ತನಿಖೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಬಿಇಒ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.